ಬೆಂಗಳೂರು: ಕನ್ನಡ ಭಾಷೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಹುಭಾಷಾ ನಟ ಕಮಲ್ ಹಾಸನ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಸಮಾಲೋಚನೆ ನಡೆಸುವವರೆಗೂ ವಿಚಾರಣೆ ಮುಂದೂಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು. 'ಥಗ್ ಲೈಫ್' ಸಿನಿಮಾ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ನಾರಾಯಣ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿಯು ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ತಿಳಿಸಿತ್ತು. ಇದಕ್ಕೆ ಕಮಲ್ ಹಾಸನ್ ಸ್ಪಷ್ಟನೆ ನೀಡಿ ಪತ್ರ ಬರೆದಿದ್ದಾರೆ. ಇದರಲ್ಲಿ ಕ್ಷಮೆ ವಿಚಾರ ಪ್ರಸ್ತಾಪವಾಗಿಲ್ಲ. ಈ ಕುರಿತು ಸಮಾಲೋಚನೆ ನಡೆಸಲು ನಿರ್ಧರಿಸಿರುವುದರಿಂದ ವಿಚಾರಣೆ ಮುಂದೂಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ವಿಚಾರಣೆ ನಡೆಸಿದ ಹೈಕೋರ್ಟ್, ತಮಿಳು ಭಾಷೆಯಿಂದಲೇ ಕನ್ನಡ ಭಾಷೆ ಜನ್ಮ ತಾಳಿದೆ ಎಂಬುದಾಗಿ ಹೇಳಲು ನೀವು ಭಾಷಾ ತಜ್ಞರೇ ಎಂದು ಕಮಲ್ ಹಾಸನ್ ಅವರನ್ನು ಪ್ರಶ್ನಿಸಿತ್ತು. ಜೊತೆಗೆ, ಮೌಖಿಕವಾಗಿ ಕ್ಷಮೆಯಾಚಿಸುವಂತೆಯೂ ಸೂಚಿಸಿದೆ. ನೀವು ಕಮಲ್ ಹಾಸನ್ ಆಗಿರಬಹುದು. ಬಹುಜನರ ಭಾವನೆಗಳನ್ನು ನೋಯಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಾಕೀತು ಮಾಡಿತು.
ಥಗ್ ಲೈಫ್ ಚಿತ್ರ ನಿರ್ಮಾಣ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲರು, ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆಯನ್ನು ಆಧರಿಸಿ ಥಗ್ ಲೈಫ್ ಚಿತ್ರದ ಬಿಡುಗಡೆಗೆ ನಿಷೇಧ ವಿಧಿಸಲಾಗಿದೆ. ಇಡೀ ಹೇಳಿಕೆಯನ್ನು ನಾನು ನೋಡಿದ್ದೇನೆ. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಮಲ್ ನೀಡಿರುವ ಹೇಳಿಕೆಯನ್ನು ವ್ಯಾಪ್ತಿ ಮೀರಿ ಅರ್ಥೈಸಿಕೊಂಡು ಕನ್ನಡದ ವಿರುದ್ಧ ಏನೋ ಹೇಳಿದ್ದಾರೆ ಎನ್ನುವುದು ಸರಿಯಲ್ಲ. ಹೇಳಿಕೆ ನೀಡಿದ ನಂತರ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ. ಕಮಲ್ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ನೋಡಬೇಕು ಎಂದು ವಿವರಿಸಿದ್ದರು.