ಮಂಗಳೂರು: ನಾಗರಾಜ್ ಶಂಕರ್ ನಿರ್ದೇಶನದ, ಮುದೇಗೌಡ್ರು ನವೀನ್ ಕುಮಾರ್ ಆರ್.ಒ ಹಾಗೂ ತೆಲಗಿ ಮಲ್ಲಿಕಾರ್ಜುನಪ್ಪ ಅವರ ನಿರ್ಮಾಣದ ’ಮರಳಿ ಮನಸಾಗಿದೆ’ ಕನ್ನಡ ಚಿತ್ರದ ಬಹುಪಾಲು ಚಿತ್ರೀಕರಣ ಸುರತ್ಕಲ್, ಉಡುಪಿ, ಬೈಂದೂರು ಸಹಿತ ಕರ್ನಾಟಕ ಕರಾವಳಿಯ ವಿವಿಧ ಕಡೆಗಳಲ್ಲಿ ನಡೆದಿದೆ. ಚಿತ್ರದ ಕತೆಗೆ ಕರಾವಳಿಯ ಲಿಂಕ್ ಇದೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಈಗಾಗಲೇ ಬಿಡುಗಡೆಗೊಂಡಿರುವ ಎರಡು ಹಾಡುಗಳಿಗೆ ಅತ್ಯುತ್ತಮ ಸ್ಪಂದನೆ ದೊರೆತ್ತಿದ್ದು, ಮೂರನೇ ಹಾಡು ‘ಏನಿದು ರೋಮಾಂಚನ...’ ಉಡುಪಿಯಲ್ಲಿ ಬಿಡುಗಡೆಗೊಂಡಿದೆ ಎಂದು ನಿರ್ದೇಶಕ ನಾಗರಾಜ್ ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿತ್ರದ ನಾಯಕ ದಕ್ಷಿಣ ಕನ್ನಡ ಪುತ್ತೂರು ಮೂಲದ ಅರ್ಜುನ್ ವೇದಾಂತ್ ಈಗಾಗಲೇ 10 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕುಡ್ಲ ಕೆಫೆ- ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿರುವ ಇವರು ಈಗಾಗಲೇ ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಸ್ಮತಿ ವೆಂಕಟೇಶ್ ಅವರಿಗೆ ಇದು ಮೊದಲನೆಯ ಚಿತ್ರ ಎಂದು ಅವರು ತಿಳಿಸಿದರು.
ಜುಲೈ- ಆಗಸ್ಟ್ ನಡುವೆ ಚಿತ್ರ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದ್ದು, ಪೂರ್ವಭಾವಿಯಾಗಿ ರಾಜ್ಯದಾದ್ಯಂತ ಪ್ರಚಾರ ಕಾರ್ಯ ನಡೆದಿದೆ ಎಂದು ಚಿತ್ರ ನಿರ್ಮಾಪಕ ನವೀನ್ ಕುಮಾರ್ ಮಾಹಿತಿ ನೀಡಿದರು.
ನಟ ಭೋಜರಾಜ ವಾಮಂಜೂರು ಅವರು ಮಾತನಾಡಿ, ಅಭಿನಯಿಸಿರುವ ಎಲ್ಲ ಚಿತ್ರಗಳಲ್ಲಿ ನನ್ನ ಹಾಸ್ಯ ಪಾತ್ರಗಳನ್ನು ನೋಡಿದ್ದೀರಿ. ಆದರೆ ಈ ಚಿತ್ರದಲ್ಲಿ ಬಹು ಶೇಡ್‌ಗಳನ್ನು ಹೊಂದಿರುವ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದೇನೆ. ಚಲನಚಿತ್ರದ ಕತೆ, ಪಾತ್ರಗಳಲ್ಲಿ ಹೊಸತನವಿದ್ದು, ಕಲಾಭಿಮಾನಿಗಳು ಖಂಡಿತವಾಗಿ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ಹೊಂದಿರುವುದಾಗಿ ಹೇಳಿದರು.
ನಿರೀಕ್ಷಾ ಶೆಟ್ಟಿ, ಟಿ.ಎಸ್.ನಾಗಾಭರಣ, ಮಾನಸಿ ಸುಧೀರ್, ಸ್ವಾತಿ, ಸೀರುಂಡೆ ರಘು, ರೋಹನ್ ಮುಂತಾದವರು ಅಭಿನಯಿಸಿದ್ದಾರೆ. ಆಶಿತ್ ಸುಬ್ರಹ್ಮಣ್ಯ ಸಹ ನಿರ್ದೇಶನವಿದೆ. ಸಂಗೀತ, ಕೆ.ಕಲ್ಯಾಣ್, ಆಶಿತ್ ಸುಬ್ರಹ್ಮಣ್ಯ, ನಾಗರಾಜ ಶಂಕರ್, ಹರೀಶ್ ಎಸ್ ಸಾಹಿತ್ಯ, ಹಾಲೇಶ್ ಎಸ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ಒದಗಿಸಿದ್ದಾರೆ.