image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಪ್ರಿಲ್ 18ಕ್ಕೆ ಬುಡಕಟ್ಟು ಜನರ ಕತೆಯನ್ನಾಧರಿಸಿ ಬರುತ್ತಿದೆ “ಕೋರ”

ಏಪ್ರಿಲ್ 18ಕ್ಕೆ ಬುಡಕಟ್ಟು ಜನರ ಕತೆಯನ್ನಾಧರಿಸಿ ಬರುತ್ತಿದೆ “ಕೋರ”

ಬುಡಕಟ್ಟು ಜನರ ಬದುಕು ಬವಣೆಯ ಕತೆ ಮತ್ತು ಕೊರಗಜ್ಜನ (koragajja) ಆರಾಧನೆಯ ಕತೆಯುಳ್ಳ "ಕೋರಾ" ಕನ್ನಡ ಸಿನಿಮಾ ಇದೇ ಎಪ್ರಿಲ್ 18ರಂದು ದೇಶಾದ್ಯಂತ ತೆರೆ ಕಾಣಲಿದೆ. ತೆಲುಗು, ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಚಿತ್ರ ತೆರೆಗೆ ಬರುತ್ತಿದ್ದು, ಪಾನ್ ಇಂಡಿಯಾ ಸಿನಿಮಾವಾಗಿ ಜನರನ್ನು ಆಕರ್ಷಿಸಲಿದೆ ಎಂದು ಚಿತ್ರದ ಕಳನಾಯಕ ಹಾಗೂ ನಿರ್ಮಾಪಕ ಪಿ. ಮೂರ್ತಿ ನಗರ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ಮಾಹಿತಿ ಹಂಚಿಕೊಂಡರು.  ಕರಾವಳಿ ಭಾಗದ ಕುಕ್ಕೆ ಸುಬ್ರಹ್ಮಣ್ಯ ನಿಂತಿಕಲ್ ಎಸ್ಟೇಟ್, ಸಕಲೇಶಪುರದ ಬಾಳುಪೇಟೆ, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ(Sunami kitty) ನಾಯಕ ನಟನಾಗಿದ್ದು, ಕೊಡಗಿನ ಚರಿಷ್ಮಾ ಚೌಂದಮ್ಮ ನಾಯಕಿಯಾಗಿ ನಟಿಸಿದ್ದಾರೆ. ಚರಿಷ್ಮಾಗೆ ಇದು ಎರಡನೇ ಚಿತ್ರವಾಗಿದ್ದು ಈ ಹಿಂದೆ ಕಾಕ್ಟೇಲ್ ಚಿತ್ರದಲ್ಲಿ ನಟಿಸಿದ್ದರು. ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರೂ ಆದ ಪಿ ಮೂರ್ತಿ ಚಿತ್ರದ ನಿರ್ಮಾಪಕರು ಮತ್ತು ವಿಲನ್ ಪಾತ್ರವನ್ನೂ ಮಾಡಿದ್ದಾರೆ. ಇವರಿಗೆ ಎರಡನೇ ಸಿನಿಮಾವಾಗಿದ್ದು, ಸ್ವಮ್ ಎನ್ನುವ ಹೆಸರಿನಲ್ಲಿ ಮೊದಲ ಚಿತ್ರ ನಿರ್ಮಾಣ ಮಾಡಿದ್ದರು.ಕೋರಾ ಸಿನಿಮಾವನ್ನು ಒರಟಾ ಐ ಲವ್ ಯು  (orata i love u) ಚಿತ್ರದ ಖ್ಯಾತಿಯ ನಿರ್ದೇಶಕ ಒರಟಾ ಶ್ರೀ ನಿರ್ದೇಶಿಸಿದ್ದಾರೆ. ಇವರ ಮೊದಲ ಚಿತ್ರ ಒರಟಾ ಐ ಲವ್ ಯು ಉತ್ತಮ ಪ್ರದರ್ಶನ ಕಂಡಿದ್ದು ಬೆಸ್ಟ್ ಸ್ಟೀನ್ ಪ್ಲೆ ಗಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು.

ಕೋರಾ ಇವರ ನಾಲ್ಕನೇ ಸಿನಿಮಾವಾಗಿದ್ದು, 85 ದಿನಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಲಾಗಿದೆ. ನಿರ್ದೇಶಕ ಒರಟ ಶ್ರೀ ಮಾತನಾಡಿ, ಉಪ್ಪಿನಂಗಡಿ ಮೂಲದ ಎಂ.ಕೆ. ಮಠ ಅವರು ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.ನಾವು ಇಡೀ ಚಿತ್ರತಂಡ ಕೊರಗಜ್ಜನ ಭಕ್ತರಾಗಿದ್ದು, ನಿರ್ಮಾಪಕರು ಪರಮ ಭಕ್ತರು. ಕೋಲದ ಸನ್ನಿವೇಶ ಚಿತ್ರದಲ್ಲಿ ಇದೆ. ಹಾಗೆಂದು ನಾವು ಇದನ್ನು ಕೃತಕವಾಗಿ ಮಾಡಿಲ್ಲ. ಕೋಲ ನಡೆಯುತ್ತಿದ್ದಾಗಲೇ ನಾವು ಚಿತ್ರೀಕರಣ ಮಾಡಿದ್ದು ಅದರ ಒಂದೆರಡು ದೃಶ್ಯಗಳನ್ನು ಮಾತ್ರ ಬಳಸಿಕೊಂಡಿದ್ದೇವೆ. ಉಳಿದಂತೆ, ಕೊರಗಜ್ಞನಿಗೂ ಚಿತ್ರಕ್ಕೂ ಬೇರಾವುದೇ ಸಂಬಂಧ ಇಲ್ಲ. ಕೋಲದ ಚಿತ್ರೀಕರಣ ಮಾಡುವಾಗಲೂ ಚಪ್ಪಲಿ ಹಾಕದೆ, ಮಾಂಸಾಹಾರ ಸ್ವೀಕರಿಸದೆ ಭಕ್ತಿಯಿಂದ ನಡೆದುಕೊಂಡಿದ್ದೇವೆ ಎಂದರು.

ಸುನಾಮಿ ಕಿಟ್ಟಿ ಪಾಲಿಗೆ ಇದು ಮೊದಲ ಸಿನಿಮಾವಾಗಿದ್ದು, ಒಟ್ಟು ಚಿತ್ರೀಕರಣ ಕಾಡಿನಲ್ಲೇ ಹೆಚ್ಚಾಗಿ ನಡೆದಿದೆ. ಕಾಡಿನಲ್ಲಿ ಬದುಕುವ ಬುಡಕಟ್ಟು ಜನರ ಬದುಕು, ಆಚರಣೆಗಳ ಚಿತ್ರಣವನ್ನು ಈ ಚಿತ್ರ ಕಮರ್ಶಿಯಲ್ ಆಗಿ ಕಟ್ಟಿಕೊಡಲಿದೆ. ಚಿತ್ರವನ್ನು ಕರಾವಳಿಯ ತುಳುವರು ಕೂಡ ಸ್ವೀಕರಿಸಲಿದ್ದಾರೆ ಎನ್ನುವ ನಂಬಿಕೆ ಇದೆ ಎಂದರು. ನಾಯಕ ಸುನಾಮಿ ಕಿಟ್ಟಿ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ನನ್ನನ್ನು ರಿಯಾಲಿಟಿ ಶೊಗಳಲ್ಲಿ ನೋಡಿರುವುದಕ್ಕಿಂತ ವಿಭಿನ್ನವಾಗಿ ಇಲ್ಲಿ ನೋಡಬಹುದು. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲರ ಆಶಿರ್ವಾದ ನಮ್ಮ ಮೇಲಿರಲಿ ಎಂದರು.

Category
ಕರಾವಳಿ ತರಂಗಿಣಿ