’ತಾರಕಾಸುರ’ ಖ್ಯಾತಿಯ ರವಿಕಿರಣ್ ಅಭಿನಯಿಸುತ್ತಿರುವ ’ಅಪ್ಪು ಅಭಿಮಾನಿ’ ಚಿತ್ರದ 50 ಅಡಿ ಎತ್ತರದ ಕಟ್‌ಔಟ್ ನರ್ತಕಿ ಚಿತ್ರಮಂದಿರದ ಆವರಣದಲ್ಲಿ ಅನಾವರಣಗೊಂಡಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ರಾಘವೇಂದ್ರ ರಾಜ್‌ಕುಮಾರ್, ಸಾರಾಗೋವಿಂದು, ಎಂ.ಎನ್.ಸುರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಾರಾಗೋವಿಂದು, ಅಪ್ಪು ದಿನದಂದು ರವಿಕಿರಣ್ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿರುವುದು ಸಂತಸದ ವಿಷಯ. ಅಪ್ಪುಗೆ ಸಹಕಾರ ನೀಡಿದಂತೆ ಇವರನ್ನು ಬೆಳೆಸಿ ಎಂದು ಕನ್ನಡಿಗರನ್ನು ಕೋರಿಕೊಂಡರು.
ಚಿತ್ರದಲ್ಲಿ ನಾಯಕ ರವಿಕಿರಣ್ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದರಿಂದ ಕಟ್‌ಔಟ್‌ದಲ್ಲಿ ಅಪ್ಪು ನಂತರ ನಾಯಕನ ಚಿತ್ರ ರಾರಾಜಿಸಿದೆ. ಅಕ್ಷಯ ಮೂವಿ ಫ್ಯಾಕ್ಟರಿ ಸಂಸ್ಥೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಡಾ.ರೆಡ್.ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ತಾರಾಂಗಣದಲ್ಲಿ ರಾಘವೇಂದ್ರ ರಾಜ್ ಕುಮಾರ್, ಶರತ್‌ಲೋಹಿತಾಶ್ವ, ಹಿರಿಯ ನಟ ಸುಮನ್, ಚಿದಾನಂದ್, ಥ್ರಿಲ್ಲರ್‌ಮಂಜು, ಶಿವಪ್ಪಕುಡ್ಲೂರು ಮುಂತಾದವರು ನಟಿಸುತ್ತಿದ್ದಾರೆ.
ಶೇಖ್ ಮುನೀರ್ ಪಾಷಾ ಕಥೆ, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ನಾಯಕಿ ಇನ್ನಿತರೆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಂಡವು ಹೇಳಿಕೊಂಡಿದೆ.