image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೇ 9 ಕ್ಕೆ ಬಿಡುಗಡೆಯಾಗಲಿದೆ ನವರಸನ್ ನಿರ್ಮಾಣದ ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರಿ

ಮೇ 9 ಕ್ಕೆ ಬಿಡುಗಡೆಯಾಗಲಿದೆ ನವರಸನ್ ನಿರ್ಮಾಣದ ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರಿ

ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಚಿತ್ರರಂಗದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನವರಸನ್ ನಿರ್ಮಾಣ‌ದ, ಕಿರಣ್ ಕುಮಾರ್ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ "ಸೂತ್ರಧಾರಿ" ಚಿತ್ರ ಮೇ 9 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ನಿರ್ಮಾಪಕರಾದ ಚೇತನ್ ಗೌಡ, ಮುನೇಗೌಡ ಹಾಗೂ ರಾಜೇಶ್ "ಸೂತ್ರಧಾರಿ" ಚಿತ್ರದ ಬಿಡುಗಡೆ ದಿನಾಂಕ ಅನಾವರಣ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. 

ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ ಎಂದು ಮಾತನಾಡಿದ ನಿರ್ಮಾಪಕ ನವರಸನ್, ನಾನು ನಿರ್ಮಾಪಕ ಮತ್ತು ನಿರ್ದೇಶಕ ಮಾತ್ರ ಅಲ್ಲ. ವಿತರಕ ಕೂಡ. ಸುಮಾರು 200 ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಕಳೆದ ವರ್ಷದಿಂದ ಇಲ್ಲಿಯವರೆಗೆ ವಾರಕ್ಕೆ ಹತ್ತರಂತೆ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹಾಗಾಗಿ ನಾನು ಈ ಸಮಯದಲ್ಲಿ ನನ್ನ ಚಿತ್ರವನ್ನು ಬಿಡುಗಡೆ ಮಾಡಲಿಲ್ಲ‌. ಈಗ ನಲವತ್ತು ದಿನಗಳ ಮುಂಚೆ ಚಿತ್ರದ ದಿನಾಂಕ ಘೋಷಣೆ ಮಾಡುತ್ತಿದ್ದೇನೆ. ಮೇ 9 ರಂದು ನಮ್ಮ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರತಂಡದ ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇಂದಿನಿಂದ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದು, ಈ ಚಿತ್ರದಲ್ಲಿ ನೀವು ಚಂದನ್ ಶೆಟ್ಟಿ ಅವರನ್ನು ವಿಭಿನ್ನ ಪಾತ್ರದಲ್ಲಿ ನೋಡಬಹುದು. ಬಿಡುಗಡೆ ದಿನಾಂಕ ಅನಾವರಣ ಮಾಡಿಕೊಟ್ಟ ನಿರ್ಮಾಪಕರಿಗೆ ಹಾಗೂ ನನ್ನ‌ ತಂಡಕ್ಕೆ ಈ ಸಮಯದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು. 

ನಾಯಕನಾಗಿ ಇದು ಮೊದಲ ಸಿನಿಮಾ‌.‌ ನನ್ನ ಪಾತ್ರ ಬಹಳ ಚೆನ್ನಾಗಿದೆ. ಈ ಚಿತ್ರದಲ್ಲಿ ನಟಿಸಿದ ನಂತರ ನನ್ನ‌ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈಗ ನಾನು ಬಹಳ ದಿನಗಳಿಂದ ಕಾಯುತ್ತಿದ್ದ "ಸೂತ್ರಧಾರಿ" ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಮೇ 9 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಅಧಿಕ ಮಿಲಿಯನ್ ವೀಕ್ಷಣೆಯಾಗಿ ಟ್ರೆಂಡಿಂಗ್ ನಲ್ಲಿದೆ.  ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಚಂದನ್ ಶೆಟ್ಟಿ.

ಮತ್ತೊಬ್ಬ ನಟಿ ಸಂಜನಾ ಆನಂದ್ ಮಾತನಾಡಿ , ನಾನು ಮತ್ತು ಚಂದನ್ ಅಭಿನಯಿಸಿರುವ ಈ ಚಿತ್ರದ "ಡ್ಯಾಶ್" ಹಾಡು ಇಪ್ಪತ್ತೊಂಭತ್ತಕ್ಕೂ ಅಧಿಕ ಮಿಲಿಯನ್ ವೀಕ್ಷಣೆಯಾಗಿದೆ. ಚಿತ್ರ ಕೂಡ ಇದೇ‌ ರೀತಿ ಯಶಸ್ವಿಯಾಗಲಿದೆ ಎಂದರು.  ನಟಿ ಅಪೂರ್ವ ಮಾತನಾಡಿ, ನಟ ಚಂದನ್ ಶೆಟ್ಟಿ ಜೊತೆ ನಟಿಸಿದ್ದು ಒಳ್ಳೆಯ ಅನುಭವ, ಒಳ್ಳೆಯ ಪಾತ್ರ ಸಿಕ್ಕಿದೆ. ಮೇ 9 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನನ್ನ ಪಾತ್ರವೂ ಚೆನ್ನಾಗಿದೆ ಎಂದು ಹೇಳಿದರು.  

ನಿರ್ದೇಶಕ ಕಿರಣ್ ಕುಮಾರ್ ಮಾತನಾಡಿ, ಇದು ನನ್ನ ಮೊದಲ‌ ನಿರ್ದೇಶನದ ಸಿನಿಮಾ. ಚಿತ್ರ ಚೆನ್ನಾಗಿ ‌ಮೂಡಿಬಂದಿದೆ.‌ ನಾನು ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಅವರ ಬಳಿ ಸಹಾಯಕನಾಗಿ ಕೆಲಸ‌ಮಾಡಿದ್ದೆ. ನನ್ನ ಮೊದಲ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಗುರುಗಳೇ ಛಾಯಾಗ್ರಹಣ ಮಾಡಿರುವುದು ನೀಡಿರುವುದು ಖುಷಿಯ ವಿಚಾರ. ಅವಕಾಶ ನೀಡಿದ ನವರಸನ್ ಅವರಿಗೆ ಧನ್ಯವಾದ ಎಂದರು

ಚಿತ್ರದಲ್ಲಿ ನಟಿಸಿರುವ ಗಣೇಶ್ ನಾರಾಯಣ್, ಪ್ರಶಾಂತ್ ನಟನ, ಮೀರಾಶ್ರೀ, ಸುಶ್ಮಿತಾ, ಪಲ್ಲವಿ ಮುಂತಾದವರು "ಸೂತ್ರಧಾರಿ" ಚಿತ್ರದ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ