image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸತ್ಯ ಘಟನೆಯ "ಶಭಾಷ್ ಬಡ್ಡಿ ಮಗ್ನೆ" ಪೆ. 28ಕ್ಕೆ ನಿಮ್ಮ ಮುಂದೆ....

ಸತ್ಯ ಘಟನೆಯ "ಶಭಾಷ್ ಬಡ್ಡಿ ಮಗ್ನೆ" ಪೆ. 28ಕ್ಕೆ ನಿಮ್ಮ ಮುಂದೆ....

 ಡಾ.ರಾಜ್‌ಕುಮಾರ್ ಚಿತ್ರದಲ್ಲಿ ಬಳಸುತ್ತಿದ್ದ ’ಶಭಾಷ್ ಬಡ್ಡಿಮಗ್ನೆ’ ಈಗ ಸಿನಿಮಾದ ಶೀರ್ಷಿಕೆಯಾಗಿದೆ. ಪ್ರಚಾರದ ಸಲುವಾಗಿ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಕಿಶನ್ ಪ್ರೊಡಕ್ಷನ್ ಅಡಿಯಲ್ಲಿ ಚೈತ್ರಾಪ್ರಕಾಶ್ ಬಂಡವಾಳ ಹೂಡಿರುವುದು ಹೊಸ ಅನುಭವ. ಬರವಣಿಗೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಬಿ.ಎಸ್.ರಾಜಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ’ಅಂತ ಬಾಯ್ತುಂಬ ಹೋಗ್ಳೋದಾ? ಇಲ್ಲಾ ತೆಗ್ಳೋದಾ?’ ಎಂಬ ಕ್ಯಾಚಿ ಅಡಬರಹ ಇರಲಿದೆ.

 ಸಂಗೀತ ಸಂತೋಷ್ ಜೋಶ್ವ, ಸಹ ನಿರ್ದೇಶನ ಎಸ್.ಜೆ.ಸಂಜಯ್, ಸಂಕಲನ ಶ್ರೀನಿವಾಸ್ ಕಲಾಲ್, ನೃತ್ಯ ಧನಂಜಯ್, ಸಾಹಸ ಚಿನ್ನಯ್ಯ ಅವರದಾಗಿದೆ. ಪ್ರಮೋದ್‌ಶೆಟ್ಟಿ ನಾಯಕ. ಆದ್ಯಪ್ರಿಯಾ ನಾಯಕಿ. ರೀಲ್ಸ್ ಮಾಡುತ್ತಾ ಹೆಸರು ಮಾಡಿರುವ ಹಾಸನ ಮೂಲದ ಸಾಮ್ರಾಟ್ ಶೆಟ್ಟಿ ಮೊದಲ ಬಾರಿ ತೆರೆ ಹಂಚಿಕೊಂಡಿದ್ದಾರೆ. ಉಳಿದಂತೆ ಕಾವ್ಯಪ್ರಕಾಶ್, ರವಿತೇಜ, ಮಿತ್ರ, ಮೂಗುಸುರೇಶ್, ಶಂಕರ್‌ಅಶ್ವಥ್, ಪ್ರಕಾಶ್‌ ತೂಮಿನಾಡು ಮುಂತಾದವರು ನಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು 90ರ ದಶಕದಲ್ಲಿ ಪರಿಚಿತರೊಬ್ಬರು ಹೇಳಿದ ಘಟನೆಯ ಎಳೆಯನ್ನು ಚಿತ್ರರೂಪಕ್ಕೆ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಅಂದಿನ ಕಾಲಘಟ್ಟಕ್ಕೆ ಹೊಂದಿಕೊಂಡಂತ ಸ್ಥಳಗಳು ಮತ್ತು ಕಾಸ್ಟ್ಯೂಮ್‌ಗಳನ್ನು ಬಳಸಿರುವುದು ವಿಶೇಷ. ಶತಸೊಂಬೇರಿ ಪೋಲೀಸ್ ಅಧಿಕಾರಿಯೊಬ್ಬನ ಕತೆಯಾಗಿದೆ. ಆತನು ಕರ್ತವ್ಯಕ್ಕಿಂತ ವೈಯಕ್ತಿಕ ಬದುಕಿನಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾ ವೃತ್ತಿ ಬದುಕನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಮುಂದೆ ಈತನ ಠಾಣಾ ವ್ಯಾಪ್ತಿಯಲ್ಲಿ ಅಪರಾಧವೊಂದು ನಡೆಯುತ್ತದೆ. ಅದನ್ನು ಹೇಗೆ ತನಿಖೆ ಮಾಡುತ್ತಾನೆ ಎಂಬುದನ್ನು ನೋಡುಗರಿಗೆ ಮನರಂಜನೆ ರೀತಿಯಲ್ಲಿ ಕಾಮಿಡಿ ಪಂಚಿಂಗ್ ಡೈಲಾಗ್‌ಗಳ ಮೂಲಕ ತೋರಿಸಲಾಗಿದೆ. ಚಿಕ್ಕಮಗಳೂರು, ಕಳಸ, ಹೊರನಾಡು ಹಾಗೆಯೇ ಎರಡು ಹಾಡನ್ನು  ಬ್ಯಾಂಕಾಕ್‌ದಲ್ಲಿ ಚಿತ್ರೀಕರಿಸಲಾಗಿದೆ. ನಮ್ಮ ಕೆಲಸ ಮುಗಿದಿದೆ. ಮುಂದಿನದು ಮಾಧ್ಯಮದವರ ಪ್ರೋತ್ಸಾಹ ಬೇಕೆಂದು ಕೋರಿಕೊಂಡರು.

 ಸಿನಿಮಾದಲ್ಲಿ ಹಾಸ್ಯ, ರೋಮಾನ್ಸ್, ಸಾಹಸ ಎಲ್ಲವು ಇರುವುದರಿಂದ ಬೋರ್ ಅನಿಸುವುದಿಲ್ಲ. ದಯವಿಟ್ಟು ನೀವುಗಳು ಚಿತ್ರಮಂದಿರಕ್ಕೆ ಬರಬೇಕೆಂದು ನಿರ್ಮಾಪಕಿ ಚೈತ್ರಾಪ್ರಕಾಶ್ ಕೇಳಿಕೊಂಡರು.

ನಾಯಕ ಪ್ರಮೋದ್‌ಶೆಟ್ಟಿ ಹೇಳುವಂತೆ ಇಲ್ಲಿಯತನಕ ಭ್ರಷ್ಟ, ಪ್ರಾಮಾಣಿಕ, ಮುಗ್ದ, ಖಳ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೆ. ರಿಯಲ್‌ದಲ್ಲಿ ಎಂದಿಗೂ ಸುಮ್ಮನೆ ಕೂತವನಲ್ಲ. ಆದರೆ ರೀಲ್‌ದಲ್ಲಿ ಸೊಂಬೇರಿ ಪೋಲೀಸ್ ಆಫೀಸರ್ ಆಗಿ ಪಾತ್ರವನ್ನು ನಿಭಾಯಿಸಿದ್ದೇನೆ. ಛಾಯಾಗ್ರಾಹಕ ಅಣಜಿ ನಾಗರಾಜ್ ಬಗ್ಗೆ  ಕೇಳಿದ್ದೆ. ಭೇಟಿಯಾಗಿರಲಿಲ್ಲ. ನಂತರ ನಿರ್ದೇಶಕರು ಹೇಳಿದ ಕತೆಯಲ್ಲಿ ಕುತೂಹಲಗಳು, ಹಾಸ್ಯ ತುಂಬಿಕೊಂಡಿತ್ತು. ಇಲ್ಲ ಎನ್ನಲು ಆಗಲಿಲ್ಲ. ಇಡೀ ಸಿನಿಮಾವು ಠಾಣೆ ಸುತ್ತ ನಡೆಯುತ್ತದೆ. ಅಲ್ಲಿನ ಜನರು, ಸಿಬ್ಬಂದಿಯಿಂದ ನಿಷ್ಷ್ರಯೋಜಕನೆಂದು ಕರೆಸಿಕೊಂಡಿದ್ದ ನನಗೆ ಒಂದು ಕೇಸಿನಲ್ಲಿ ಜಯ ಸಿಗುತ್ತದೆ. ಅದು ಏನು ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ಶುರುವಿನಿಂದ ಕೊನೆವರೆಗೂ ಉಸಿರಾಡಲು ಬಿಡದೆ ನಗಿಸುತ್ತಲೇ ಇರುತ್ತದೆ. ಅದೇ ಪ್ಲಸ್ ಪಾಯಿಂಟ್ ಎಂದರು.  ಚಿತ್ರವು ಇದೇ ತಿಂಗಳ ಕೊನೆ ವಾರದಂದು ತೆರೆ ಕಾಣುತ್ತಿದೆ.

Category
ಕರಾವಳಿ ತರಂಗಿಣಿ