ಬಾದಾಮಿ:'ರಾಜ್ಯ ಸರ್ಕಾರವು ಗುಬ್ಬಿ ವೀರಣ್ಣ ಪ್ರಶಸ್ತಿಗೆ ಹವ್ಯಾಸಿ ರಂಗಭೂಮಿ ಕಲಾವಿದರನ್ನು ಆಯ್ಕೆ ಮಾಡದೇ ವೃತ್ತಿ ರಂಗಭೂಮಿಗೆ ಈ ಪ್ರಶಸ್ತಿಯನ್ನು ಮೀಸಲಾಗಿರಿಸಬೇಕು' ಎಂದು ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ ಎಲ್.ಬಿ. ಶೇಖ್ ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವೃತ್ತಿ ರಂಗಭೂಮಿ ಕಲಾವಿದರಿಗೆ 'ಗುಬ್ಬಿ ವೀರಣ್ಣ ಪ್ರಶಸ್ತಿ' ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರಿಗೆ 'ಕಾರಂತ ಪ್ರಶಸ್ತಿ' ಕೊಡುತ್ತ ಬರಲಾಗಿದೆ. ಆದರೆ ಈ ಬಾರಿ ಆಯ್ಕೆ ಸಮಿತಿ ಅಧ್ಯಕ್ಷ ಕುಂ. ವೀರಭದ್ರಪ್ಪ ಮತ್ತು ಸಮಿತಿ ಸದಸ್ಯರು 2023ರ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಹವ್ಯಾಸಿ ರಂಗಭೂಮಿ ಕಲಾವಿದೆಯೊಬ್ಬರನ್ನು ಆಯ್ಕೆ ಮಾಡಿ ವೃತ್ತಿ ರಂಗಭೂಮಿಯನ್ನು ನಿರ್ಲಕ್ಷಿಸಿದ್ದಾರೆ' ಎಂದು ದೂರಿದರು.
'ಪ್ರಶಸ್ತಿ ಆಯ್ಕೆ ಬಗ್ಗೆ ಸರ್ಕಾರಿ ಆದೇಶವಾಗಿದ್ದರೂ ಮುಖ್ಯಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅದನ್ನು ತಡೆಹಿಡಿದು, ಮರುಪರಿಶೀಲಿಸಿ ವೃತ್ತಿರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ನೀಡಬೇಕು ಎಂದು ವೃತ್ತಿ ರಂಗಭೂಮಿ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಪ್ಪ ಚಿಂದೋಡಿ ಅವರು ಒತ್ತಾಯಿಸಿದ್ದಾರೆ' ಎಂದರು.
ಈ ಸಂದರ್ಭದಲ್ಲಿ ವೃತ್ತಿ ರಂಗಭೂಮಿ ನಾಟಕ ಕಂಪನಿಗಳ ಮಾಲೀಕರಾದ ಶ್ರೀಕಂಠೇಶ ಚಿಂದೋಡಿ, ಪ್ರೇಮಾ ಗುಳೇದಗುಡ್ಡ, ಮಂಟೇಶ ದಂಡಿನ, ಬಸೀರ್ ತಾಳಿಕೋಟಿ, ಬಾಪು ಕಲ್ಲೂರ, ಮಂಜಣ್ಣ ಜಾಲಿಹಾಳ, ಕುಮಾರ ಹಳ್ಳಿ, ಕವಿ ರಾಜಣ್ಣ ಜೇವರ್ಗಿ, ಪ್ರೇಮಾ ಗುಳೇದಗುಡ್ಡ ಉಪಸ್ಥಿತರಿದ್ದರು.