ಅಭಯ್ ಖುಷಿ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಮೂಲತಃ ರೈತರಾಗಿರುವ ವಾಸುದೇವ ಆರ್ ದೊಡ್ಡಹೆಜ್ಜಾಜಿ ಅವರು ನಿರ್ಮಿಸಿರುವ, ಸಮರ್ಥ್ ಎಂ ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ "ಅಥಣಿ" ಚಿತ್ರದ "ಬಾರೆ ಬಾರೆ" ಎಂಬ ಹಾಡು ತುಮಕೂರಿನ ದಿಬ್ಬೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಯಾಗಿದೆ. ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷರಾದ ಮುರಳಿಧರ ಹಾಲಪ್ಪ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ರಾಜು ಚಿತ್ರಪುರ ಬರೆದಿರುವ ಈ ಹಾಡನ್ನು ಸ್ವಾತಿ ಶಂಕರ್ ಹಾಗೂ ಹರ್ಸಿವ್ ಭಘೀರ ಹಾಡಿದ್ದಾರೆ. ಹರ್ಷ ಕುಗೋಡು ಸಂಗೀತ ನೀಡಿದ್ದು, ಅಭಯ ಖುಷಿ ಮ್ಯೂಸಿಕ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ನಿರ್ದೇಶಕರಾಗಿ ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಸಮರ್ಥ ಈ ಚಿತ್ರದ ಮೂಲಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಮಧು ಈ ಚಿತ್ರದ ನಾಯಕಿ. ಶೋಭರಾಜ್, ಭವ್ಯ ಯತಿರಾಜ್, ಬಲರಾಜವಾಡಿ , ರಾಕೇಶ್ ಪೂಜಾರಿ, ಮೂರ್ತಿ, ವಿಷ್ಣುಪ್ರಿಯ, ಶ್ರೀನಿಧಿ, ಇಂದ್ರ ಕುಮಾರ್, ಸಿ ಜಿ ದಿಬ್ಬೂರು ಮುಂತಾದವರು ತಾರಾಗಣದಲ್ಲಿದ್ದಾರೆ.
ರೈತಪರ ಕಾಳಜಿಯನ್ನು ಹೊಂದಿರುವ ಈ ಚಿತ್ರದಲ್ಲಿ ಕ್ರೈಂ..ಲವ್ ..ಸಸ್ಪೆನ್ಸ್.. ಮತ್ತು ಕಾಮಿಡಿ ಹೀಗೆ ಪ್ರೇಕ್ಷಕನಿಗೆ ಬೇಕಾದ ಎಲ್ಲಾ ಅಂಶಗಳಿದ್ದು, ಹರ್ಷ ಕೂಗೋಡು ಸಂಗೀತ ನೀಡಿರುವ ಐದು ಹಾಡುಗಳಿದೆ. ಆ ಪೈಕಿ ಮೊದಲ ಹಾಡಾಗಿ "ಬಾರೆ ಬಾರೆ" ಐಟಂ ಸಾಂಗ್ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಹಾಡುಗಳು ಅನಾವರಣವಾಗಲಿದೆ.
ಸಂದೀಪ್ ಹೊನ್ನಾಳಿ ಛಾಯಾಗ್ರಹಣ ಹಾಗೂ ಸುನಯ್ ಜೈನ್ ಸಂಕಲನವಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ.