ಮೈಸೂರು: ಎರಡು ವರ್ಷಗಳ ಕಾಯುವಿಕೆಯ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಮ್ಯಾಕ್ಸ್ ಡಿ.25 ರಂದು ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಕೂಡ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿರುವ ಹಿನ್ನೆಲೆ ಇಂದು ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ನಿರ್ಮಾಪಕ ಮತ್ತು ವಿತರಕರಾದ ಕಾರ್ತಿಕ್ ಗೌಡ ಅವರು ಕೂಡ ಕಿಚ್ಚನಿಗೆ ಸಾಥ್ ನೀಡಿದರು.
ನೆಚ್ಚಿನ ನಟ ಸುದೀಪ್ ಭೇಟಿ ಹಿನ್ನೆಲೆ ಅಭಿಮಾನಿಗಳ ದಂಡೇ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದಿತ್ತು. ಸುದೀಪ್ರನ್ನು ನೋಡಿದ ಫ್ಯಾನ್, ಜೈಕಾರ, ಶಿಳ್ಳೆ ಹಾಕಿ ಖುಷಿಪಟ್ಟರು. ಅಭಿಮಾನಿಗಳನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸವಾಯಿತು.
ಚಾಮುಂಡಿ ದೇವಿಗೆ ಪೂಜೆ ಮುಗಿಸಿ ದೇವಾಲಯದಿಂದ ಸುದೀಪ್ ಹೊರಬಂದೊಡನೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ನಂತರ ಕಾರಿನೊಳಕ್ಕೆ ತೆರಳಿದ ಸುದೀಪ್ ಅವರು, ಅಭಿಮಾನಿಗಳತ್ತ ಕೈ ಬೀಸಿದರು.
ಡಿಸೆಂಬರ್ 25ರಂದು ಬಿಡುಗಡೆಗೊಂಡ ಮ್ಯಾಕ್ಸ್ಗೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕವಾಗಿದೆ.
ಮ್ಯಾಕ್ಸ್ ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿದೇಶಿಸಿದ್ದು, ಕಿಚ್ಚ ಕ್ರಿಯೇಶನ್ಸ್, ವಿ ಕ್ರಿಯೇಶನ್ಸ್ ಬ್ಯಾನರ್ ಅಡಿ ಬಿಗ್ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ.