ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ನವೀನ್ ಶಂಕರ್ ನಟನೆಯ ನೋಡಿದವರು ಏನಂತಾರೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ತಿಂಗಳ 31ರಂದು ತೆರೆಗೆ ಬರ್ತಿರುವ ಈ ಚಿತ್ರದ ಟೀಸರ್ ಅನಾವರಣಗೊಂಡಿದೆ. ಪ್ರೀತಿ, ನಗು, ಅಳು, ಭಾವನಾತ್ಮಕ ಅಂಶಗಳನ್ನು ಬ್ಲೆಂಡ್ ಮಾಡಿ ಟೀಸರ್ ಕಟ್ ಮಾಡಲಾಗಿದೆ. ಕುಲದೀಪ್ ಕಾರಿಯಪ್ಪ ಬರೆದು ನಿರ್ದೇಶಿಸಿಸಿರುವ ನೋಡಿದವರು ಏನಂತಾರೆ ಚಿತ್ರವನ್ನು ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಯ್ಸಳ, ಕ್ಷೇತ್ರಪತಿ ಮತ್ತು ಸಲಾರ್ ಸಿನಿಮಾಗಳಲ್ಲಿ ರಗಡ್ ಪಾತ್ರಗಳ ಮೂಲಕ ಎಲ್ಲರ ಗಮನಸೆಳೆದಿದ್ದ ನವೀನ್ ಶಂಕರ್, ಈ ಚಿತ್ರದಲ್ಲಿ ಕೊಂಚ ವಿಭಿನ್ನವಾಗಿ ಕಾಣಿಸಲಿದ್ದಾರೆ.
ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದಾರೆ. ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ, ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.
ಖ್ಯಾತ ಲೇಖಕ ಹಾಗು ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಜನವರಿ 31, 2025 ರಂದು ಬಿಡುಗಡೆಯಾಗ್ತಿರುವ ನೋಡಿದವರು ಏನಂತಾರೆ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಅನ್ನೋದು ಚಿತ್ರತಂಡದ ಅಭಿಪ್ರಾಯ.