ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಅವರು ಅರ್ಪಿಸುತ್ತಿರುವ ಮತ್ತು ಈ ಹಿಂದೆ F3 ಪ್ರೊಡಕ್ಷನ್ಸ್ ಲಾಂಛನದಲ್ಲಿ "ಮ್ಯಾಟ್ನಿ" ಚಿತ್ರವನ್ನು ನಿರ್ಮಿಸಿದ್ದ ಎಸ್ ಪಾರ್ವತಿ ಗೌಡ, ಪವನ್ ಪರಮಶಿವಂ ಹಾಗೂ ಮನೋಹರ್ ಕಾಂಪಲ್ಲಿ ನಿರ್ಮಿಸುತ್ತಿರುವ ಮತ್ತು ಮನೋಜ್ ಪಿ ನಡಲುಮನೆ ನಿರ್ದೇಶಿಸುತ್ತಿರುವ ಚಿತ್ರ "ನೀ ನಂಗೆ ಅಲ್ಲವಾ".
ರಾಹುಲ್ ಅರ್ಕಾಟ್ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣವಾಯಿತು. ಶ್ರೀಮುರಳಿ ಅವರೆ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಈ ಹಿಂದೆ "ಆನಾ" ಹಾಗೂ "ಮೇರಿ" ಚಿತ್ರಗಳನ್ನು ನಿರ್ದೇಶಿಸಿದ್ದ ಮನೋಜ್ ಪಿ ನಡಲುಮನೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮನೋಜ್ ಅವರೆ ಬರೆದಿದ್ದಾರೆ. ಸೂರಜ್ ಜೋಯಿಸ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ನಾಗೇಂದ್ರ ಉಜ್ಜನಿ ಅವರ ಸಂಕಲನ ಈ ಚಿತ್ರಕ್ಕಿದೆ.
ನಟ ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಅವರು ಅರ್ಪಿಸುತ್ತಿರುವ ಮೊದಲ ಚಿತ್ರ "ನೀ ನಂಗೆ ಅಲ್ಲವಾ". ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಪಕ್ಕಾ ಕಮರ್ಷಿಯಲ್ ಚಿತ್ರವಿದು. ಸಂಕ್ರಾಂತಿ ನಂತರ ಚಿತ್ರೀಕರಣ ಆರಂಭವಾಗಲಿದ್ದು,
ಯಾವುದೇ ಕೊರತೆಯಿಲ್ಲದೇ ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುವ ಸಿದ್ದತೆಯಲ್ಲಿ ನಿರ್ಮಾಪಕರಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಮನೋಜ್ ಪಿ ನಡಲುಮನೆ ತಿಳಿಸಿದ್ದಾರೆ.