ಹದಿನೆಂಟು ವರ್ಷಗಳ ಹಿಂದೆ ಇ.ಕೆ. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸಿ, ಯೋಗರಾಜ್ ಭಟ್ ನಿರ್ದೇಶಿಸಿದ್ದ ಸೂಪರ್ ಹಿಟ್ ಚಲನಚಿತ್ರ "ಮುಂಗಾರು ಮಳೆ". ಇಷ್ಟು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.
ಇ.ಕೃಷ್ಣಪ್ಪ ನಿರ್ಮಾಣದಲ್ಲಿ ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ನೂತನ ಚಿತ್ರದ ಹೆಸರು "ಮನದ ಕಡಲು". ಸುಮುಖ ಈ ಚಿತ್ರದ ನಾಯಕನಾಗಿ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ಹಾಗೂ ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಿ.ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು. ಬೆಂಗಳೂರಿನ ಅರಮನೆ ಆವರಣದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ಮಾಧ್ಯಮದ ಮಿತ್ರರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆತ್ಮೀಯವಾಗಿ ಆಹ್ವಾನಿಸಿತ್ತು. ಚಿತ್ರದ ಶೀರ್ಷಿಕೆ ಸಹ ಇದೇ ಸಂದರ್ಭದಲ್ಲಿ ಅನಾವರಣವಾಯಿತು.