ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಸುಮಾರು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ "UI" ಚಿತ್ರದ ವಾರ್ನರ್ ಬಿಡುಗಡೆಯಾಗಿದೆ. ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಟೀಸರ್ ಹಾಗೂ ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಆದರೆ ಉಪೇಂದ್ರ ಅವರು ಇವೆರಡನ್ನೂ ಬಿಡುಗಡೆ ಮಾಡದೆ ವಾರ್ನರ್ ಬಿಡುಗಡೆ ಮಾಡಿದ್ದಾರೆ. ಈ ವಾರ್ನರ್ ನಲ್ಲಿ 2040ರ ಕಾಲಘಟ್ಟದ ಪರಿಸ್ಥಿತಿಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. "UI" ಚಿತ್ರ ಇದೇ ತಿಂಗಳ 20 ರಂದು ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕಿತ್ತು ತಿನ್ನುವ ಬಡತನದ ಜಾಗಕ್ಕೆ ಐಶಾರಾಮಿ ಕಾರಿನಲ್ಲಿ ಆಗಮಿಸುವ ನಾಯಕ ಜನರ ದಿಕ್ಕಾರಕ್ಕೆ ಸೆಡ್ಡು ಹೊಡೆದು "ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ" ಎನ್ನುವ ಪವರ್ ಪುಲ್ ಸಂಭಾಷಣೆ , ಕಣ್ಮನ ಸೆಳೆಯುವ ಛಾಯಾಗ್ರಹಣ "ವಾರ್ನರ್" ನಲ್ಲಿದ್ದು, ಕೋವಿಡ್ ನಿಂದ ಜಾಗತಿಕ ಹಣದುಬ್ಬರ ಸಮಸ್ಯೆ ಸೃಷ್ಟಿಸಿದರೆ ಕೃತಕಬುದ್ದಿ ಮತ್ತೆಯಿಂದ ನಿರುದ್ಯೋಗ ಸಮಸ್ಯೆ, ಯುದ್ದದಿಂದ 2040 ರಲ್ಲಿ ದೇಶ ಹೇಗಿರಬಹುದು ಎನ್ನುವುದನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಉಪೇಂದ್ರ.
ಉಚಿತ ಮೊಬೈಲ್ ವಿತರಣೆ, ಮಂಗಳ ಗ್ರಹಕ್ಕೆ ಲಗ್ಗೆ, ಅತ್ಯಾಧುನಿಕ ಶಸ್ತಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದರೂ, ಬಾಳೆ ಹಣ್ಣು ಖರೀದಿ ಮಾಡಲು ಸಾದ್ಯವಾಗದ ಬಡತನದ ಬೇಗೆಯ ತಿರುಳು ಹೊಂದಿರುವ ಈ "UI" ಚಿತ್ರದ "ವಾರ್ನರ್" ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂನಲ್ಲಿ ಬಿಡುಗಡೆಯಾಗಿದೆ."ವಾರ್ನರ್" ಬಿಡುಗಡೆ ಬಳಿಕ ಮಂಗಳೂರಿನ ದೇವಸ್ಥಾನ, ದೈವಸ್ಥಾನಕ್ಕೆ ಬೇಟಿ ನೀಡಿದ ನಟ, ನಿರ್ದೇಶಕ ಉಪೇಂದ್ರ ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಚಿತ್ರ ಇದೇ 20 ರಂದು ಬಿಡುಗಡೆಯಾಗುತ್ತಿದೆ.
ಈಗಾಗಲೇ ನೀವು ವಾರ್ನರ್ ನೋಡಿದ್ದೀರಿ. ಇನ್ನು ನಾನು ಮಾತಾಡುವುದಲ್ಲ ನೀವು ಮಾತನಾಡಬೇಕು ಎಂದು ಪ್ರಾರಂಬಿಸಿದ ಅವರು, ವರ್ಷ ಎಲ್ಲಾ ಚಿತ್ರ ಮಾಡುವುದಲ್ಲ, ಚಿತ್ರ ಬಿಡುಗಡೆ ಸಮಯದಲ್ಲಿ ಟೆನ್ಸನ್ ಜಾಸ್ತಿ. ಸಾಮಾನ್ಯವಾಗಿ ನಾನು, ನನ್ನ ಚಿತ್ರಗಳ ಯಾವುದೇ ವಿಷಯವನ್ನು ಬಿಡುಗಡೆ ಪೂರ್ವದಲ್ಲಿ ಜನರಿಗೆ ತೋರಿಸುವುದಿಲ್ಲ. ಬಿಡುಗಡೆ ಆದ ಮೇಲೆ ಜನ ಅದನ್ನು ನೋಡಲಿ ಎಂದು ಆಸೆ ಪಡುವವನು ನಾನು. ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಜನರಿಗೆ ತಮ್ಮ ಚಿತ್ರದ ಬಗ್ಗೆ ಟೀಸರ್ ಹಾಗೂ ಟ್ರೇಲರ್ ಗಳ ಮೂಲಕ ತಲುಪಿಸುವ ಪ್ರಯತ್ನವಾಗುತ್ತಿದೆ. ಹಾಗಾಗಿ ನಾನು ಬೇರೆ ಹೆಸರು ಇರಲಿ ಅಂತ "ವಾರ್ನರ್" ರಿಲೀಸ್ ಮಾಡಿದ್ದೇನೆ. ಇನ್ನೇನಿದ್ದರೂ ಪ್ರೇಕ್ಷಕರೇ ಮಾತಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ್ ಕೆಪಿ, ಲಹರಿ ವೇಲು, ನವೀನ್ ಮನೋಹರ್ ರಾಜೇಶ್ ಭಟ್ ಮತ್ತು ಪ್ರೀತಮ್ ಶೆಟ್ಟಿ ಉಪಸ್ಥಿತರಿದ್ದರು.