ಸಂಕಷ್ಟಕರ ಗಣಪತಿ, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ "ಫುಲ್ ಮೀಲ್ಸ್" ಚಿತ್ರತಂಡ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಚಿತ್ರದ ಇಬ್ಬರು ನಾಯಕಿಯರಾದ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಒಂದೇ ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಪೋಸ್ಟರ್ ಇದಾಗಿದ್ದು, ಎಲ್ಲರೂ ಒಟ್ಟಿಗೆ ಸೇರಿ ಮಾಡುವ ಸಂಭ್ರಮವೇ ಹಬ್ಬ ಎಂಬ ಥೀಮ್ ಮೇಲೆ ತಯಾರಾಗಿರುವ ಈ ಪೋಸ್ಟರ್ ಸುಂದರವಾಗಿ ಕಾಣುತ್ತಿದೆ. ನೋಡುಗರ ಗಮನವನ್ನು ಸೆಳೆದಿದೆ. ಸಿನೆಮಾಗೆ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲವು ಕೆಲಸಗಳು ಬಾಕಿಯಿದ್ದು, ಆದಷ್ಟು ಶೀಘ್ರದಲ್ಲಿ ಸಿನೆಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ.
ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಈ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನವಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಮುಂತಾದವರಿದ್ದಾರೆ.