ಇನ್ನೇನು ಬಿಡುಗಡೆಯ ಅoಚಿಗೆ ಬoದಿರುವ ಕನ್ನಡದ "X&Y" ಚಿತ್ರದಲ್ಲಿ ಆಟೋರಿಕ್ಷಾ "ಆಂಬು ಆಟೋ " ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ. ಆಂಬುಲೆನ್ಸ್ ನಲ್ಲಿರುವoತೆ ಎಲ್ಲ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ ಚಿತ್ರದಲ್ಲಿ ಅದನ್ನೊಂದು ಕಲಾವಿದನೆoಬಂತೆ ಕಲಾತ್ಮಕವಾಗಿ ಬಳಸಲಾಗಿದೆ. ಈ ವಿಷಯ ತಿಳಿದ ಆಟೋ ಚಾಲಕರು ಗುಂಪು-ಗುಂಪಾಗಿ, ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಅವರನ್ನು ಖುದ್ದು ಭೇಟಿ ಮಾಡಿ, 'ಸರ್ ಇಲ್ಲಿತನಕ 'ಆಟೋರಿಕ್ಷಾ' ನಮ್ಮ 'ಮಿತ್ರ'ನಾಗಿತ್ತು. ಈಗದನ್ನು 'ಆಂಬು ಆಟೋ' ಆಗಿ ಪರಿವರ್ತಿಸಿ ಎಲ್ಲರ 'ಆಪ್ತಮಿತ್ರ'ನಾಗಿರುವಂತೆ ಮಾಡಿದ್ದೀರಿ ಎಂದು ಆಂಬು ಆಟೋ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲಿ ಕೆಲವರು ತಾವೂ ತಮ್ಮಆಟೋಗಳನ್ನು 'ಆಂಬು ಆಟೋ' ಆಗಿ ರೆಡಿ ಮಾಡಿ ಸಾರ್ವಜನಿಕ ಸಹಾಯಕ್ಕಾಗಿ ಬಳಸುವ ಮನಸ್ಸು ಮಾಡಿದ್ದೇವೆಂದು ಸಂತಸ ಹಂಚಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಇದೇ ನವೆಂಬರನಲ್ಲಿ ಬೆಂಗಳೂರಿನ ಜಯನಗರದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘ ಸಂಘಟಿಸಿದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಸಮಾಜಮುಖಿ ಸಮಾವೇಶದಲ್ಲಿ ಈ "ಆoಬು ಆಟೋ" ಪ್ರದರ್ಶನಕ್ಕಿಟ್ಟು ಅದರ ಕುರಿತು ವಿಸ್ತೃತ ವಿವರಣೆ ಪಡೆದು ಹರುಷ ವ್ಯಕ್ತಪಡಿಸಿದ್ದಾರೆ. ಹಾಗೇ ಆಂಬು ಆಟೋದಲ್ಲಿ ECG ತಪಾಸಣೆ ಮಾಡುವ ಮೂಲಕ ಚಾಲಕರೆಲ್ಲರಿಗೂ ನೆರವಾಯಿತು.
"X&Y" ನಿರ್ದೇಶಕರ ನಾಲ್ಕನೇ ಚಿತ್ರ. ಮೊದಲ ಮೂರು ಚಿತ್ರಗಳು "ರಾಮಾ ರಾಮಾ ರೇ ", "ಒಂದಲ್ಲಾ ಎರಡಲ್ಲಾ" ಮತ್ತು "ಮ್ಯಾನ್ ಆಫ್ ದಿ ಮ್ಯಾಚ್ " ಒಂದಕ್ಕಿಂತ ಒಂದು ಭಿನ್ನ ಕಥಾ ಮಾಲಿಕೆಯ ಚಿತ್ರಗಳಾಗಿವೆ. "ರಾಮ ರಾಮಾ ರೇ" ಉತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದರೆ, ಒಂದಲ್ಲಾ ಎರಡಲ್ಲಾ ಚಿತ್ರವು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಚಿತ್ರದಿಂದ ಚಿತ್ರಕ್ಕೆ ಹೊಸತನ್ನು ನೀಡುತ್ತ ಹೊರಳಿ ನೋಡುವಂತೆ ಮಾಡುವ ಕಲಾ ಕೌಶಲ್ಯ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರಿಗೆ ಕರಗತವಾದಂತಿದೆ. ಅದು ಈಗ "X&Y" ಚಿತ್ರದಲ್ಲು ಮುಂದುವರೆಯಲಿ ಎಂಬ ಹಾರೈಕೆ ನಮ್ಮದು. "X&Y" ಸಿನಿಮಾ ಚಿತ್ರಮಂದಿರಗಳಲ್ಲಿ ಮುಂಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆಕಾಣಲಿದೆ.