image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮರ್ಯಾದೆ ಪ್ರಶ್ನೆಗೆ ಫಿರಾಕೋ ಮಾರ್

ಮರ್ಯಾದೆ ಪ್ರಶ್ನೆಗೆ ಫಿರಾಕೋ ಮಾರ್

 ಕಳೆದ ವಾರ ಬಿಡುಗಡೆಯಾಗಿರುವ ಟ್ರೈಲರಿಂದ ನಿರೀಕ್ಷೆ ಹುಟ್ಟಿಸಿರುವ 'ಮರ್ಯಾದೆ ಪ್ರಶ್ನೆ' ಚಿತ್ರದ ಮೂರನೇಯ ಹಾಡು 'ಫಿರಾಕೋ ಮಾರ್' ಈಗ ಬಿಡುಗಡೆಯಾಗಿದೆ. ಎಲ್ಲ ಚಿತ್ರ ತಂಡಗಳು ಹಿಟ್ ಸಾಂಗ್ ಕೊಡಲು ಮುಂದಾದರೆ ಮರ್ಯಾದೆ ಪ್ರಶ್ನೆ ತಂಡ 'ಹಿಟ್ ಬ್ಯಾಕ್' ಹಾಡನ್ನು ನೀಡಿದೆ. ದಕ್ನಿ ರ್ಯಾಪರ್ ಪಾಶಾಬಾಯ್ ಈ ರ್ಯಾಪ್ ಬರೆದು ಹಾಡಿದ್ದಾರೆ. ಕಳೆದ ಎರಡು ಹಾಡುಗಳನ್ನು ಮೆಲೋಡಿ, ಜಾನಪದ ಶೈಲಿಯಲ್ಲಿ ಸಂಯೋಜಿಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಹಿಪ್‌ಹಾಪ್ ಶೈಲಿಯಲ್ಲಿ‌ ಪ್ರಸ್ತುತಪಡಿಸಿದ್ದಾರೆ.

ಈ ಹಾಡಿನ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಅರ್ಜುನ್ ರಾಮು "ಮಿಡಲ್ ಕ್ಲಾಸ್ ಅಗ್ರೆಶನ್ ತೋರಿಸುವ ಹಾಡೊಂದು ಸಿನಿಮಾಕ್ಕೆ‌ ಬೇಕಿತ್ತು. ಪಾಶಾಬಾಯ್ ಜತೆ ಸೇರಿ ಈ ರ್ಯಾಪ್ ಮಾಡಿದ್ದೇವೆ. ಕ್ಲಾಸಿನ ಜತೆ ಸಕ್ಕತ್ ಮಾಸ್ ಬಿಜಿಎಮ್ ಇರುವ ಈ ಹಾಡು ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ" ಎಂದರು.

ಟ್ರೇಲರಿನಲ್ಲಿ ತೋರಿಸಿದ ವಿಷಯಗಳಿಗೆ ಪುಷ್ಟಿ ನೀಡುವಂತಿರುವ ಎರಡೂವರೆ ನಿಮಿಷಗಳ ಈ ಹಾಡಿನ ಪ್ರೋಮೋ ವಿಡಿಯೋದಲ್ಲಿ ಸಿನಿಮಾದ ಮುಖ್ಯ ಪಾತ್ರಧಾರಿಗಳಾದ ಸುನೀಲ್ ರಾವ್, ರಾಕೇಶ್ ಅಡಿಗ ಮತ್ತು ಪೂರ್ಣಚಂದ್ರ ಮೈಸೂರು ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಹುಡುಗರನ್ನ ಬೆಳೆಯೋಕೆ ಬಿಡದೇ ಇದ್ರೂ ಬೆಳೆದೇ ಬೇಳಿತಾರೆ ಎನ್ನುವುದನ್ನು ಕೂಗಿ ಹೇಳುತ್ತಿರುವ ಈ ಹಾಡನ್ನು ಈಗ ಸಖತ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.

ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ 'ಮರ್ಯಾದೆ ಪ್ರಶ್ನೆ' ಚಿತ್ರದ ತಾರಾಗಣದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡ್ಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ. 

ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲ ಹಾಡುಗಳಿಗೆ ಅರ್ಜುನ್ ರಾಮು ರಾಗ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಸಕುಟುಂಬ ಸಮೇತ, ಗೌಳಿ ಮತ್ತು ಚಾರ್ಲಿ ಸಿನಿಮಾಗೆ ಕೆಲಸಮಾಡಿರುವ ಸಂದೀಪ್ ವೆಲ್ಲುರಿ ಈ ಸಿನಿಮಾದ ಛಾಯಾಗ್ರಾಹಕರು.

ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌ಜೆ ಪ್ರದೀಪಾ ಅವರ 'ಸಕ್ಕತ್ ಸ್ಟೂಡಿಯೋ' ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ, ಸಂಭಾಷಣೆ, ನಿರ್ದೇಶನವಿದೆ. 'ಮರ್ಯಾದೆ ಪ್ರಶ್ನೆʼ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Category
ಕರಾವಳಿ ತರಂಗಿಣಿ