ಭೈರತಿ ರಣಗಲ್ ನಲ್ಲಿ ಲಾಯರ್, ಟಗರು ಸಿನಿಮಾದಲ್ಲಿ ಪೊಲೀಸ್, ಮಫ್ತಿಯಲ್ಲಿ ಡಾನ್ ಹೀಗೆ ಪ್ರತಿ ಬಾರಿಯೂ ವಿಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುವ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಈಗ ಮಾಸ್ ನಿಂದ ಮೇಸ್ಟ್ರಾಗಿ ಬದಲಾಗುತ್ತಿದ್ದಾರೆ. ಭಜರಂಗಿ ಈಗ ಭೋದಕನಾಗಿದ್ದಾರೆ. ಭೈರತಿ ರಣಗಲ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ಇರುವ ಸಂದರ್ಭದಲ್ಲಿ ಮಕ್ಕಳಿಗಾಗಿ ಪೆನ್ನು ಹಿಡಿದಿದ್ದಾರೆ. ಇಂದು ಮಕ್ಕಳ ದಿನಾಚರಣೆಯ ಈ ಶುಭ ದಿನದಂದು ಶಿವಣ್ಣ ಮಕ್ಕಳ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟುರಟ್ಟು ಮಾಡಿದ್ದಾರೆ. 'ಸುಂದರ ಕಾಂಡ’ ಸಿನಿಮಾದಲ್ಲಿ ಟೀಚರ್ ಆಗಿ ಅಭಿನಯಿಸಿದ್ದ ಕರುನಾಡ ಕಿಂಗ್ ಈಗ ಬಹಳ ವರ್ಷದ ಬಳಿಕ ಈ ರೀತಿಯ ಪಾತ್ರ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ.
ಲಾಂಗ್ ಬಿಟ್ಟು ಶಿವಣ್ಣ ಈಗ ಪೆನ್ನು ಹಿಡಿಯುತ್ತಿದ್ದಾರೆ. ಗುರುವಾಗುತ್ತಿರುವ ಶಿವಣ್ಣನಿಗೆ ಓಂಕಾರ ಹಾಕೋದಿಕ್ಕೆ ಘೋಸ್ಟ್ ಸೂತ್ರಧಾರ ಶ್ರೀನಿ ಸಜ್ಜಾಗಿದ್ದಾರೆ. ಶ್ರೀನಿ ಬೇರೆ ತರಹದ ಕಥೆ ಮಾಡಿಕೊಂಡು ಬಂದಿದ್ದಾರೆ. ಪಾತ್ರ ಕೂಡಾ ರೆಗ್ಯುಲರ್ ಆಗಿಲ್ಲ. ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಇರಲಿದೆ. ಶಿವಣ್ಣ-ಶ್ರೀನಿ ಕಾಂಬೋದ A for ಆನಂದ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ವೇದ, ಭೈರತಿ ರಣಗಲ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿರುವ ಗೀತಾ ಶಿವರಾಜ್ ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. A for ಆನಂದ್ ಸಿನಿಮಾಗೆ ಬಹುತೇಕ ಘೋಸ್ಟ್ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಚಿತ್ರಕ್ಕಿದೆ. ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಇಡೀ ತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.