"ಲಾಫಿಂಗ್ ಬುದ್ದ" ನಾಗಿ ಜನರ ಮನಸ್ಸಿಗೆ ಹತ್ತಿರವಾಗಿರುವ ಪ್ರಮೋದ್ ಶೆಟ್ಟಿ ಈಗ "ಜಲಂಧರ"ನಾಗಿ ಬರುತ್ತಿದ್ದಾರೆ. ಸ್ಟೆಪ್ ಆಫ್ ಲೋಕಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ "ಸಂತೆಯ ದಾರಿಯಲ್ಲಿ" ಎಂಬ ಮನಮೋಹಕ ಹಾಡು ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದ್ದು, ಖ್ಯಾತ ನಟ ಶರಣ್ ಈ ಹಾಡನ್ನು ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸುಪ್ರೀತ್ ಶರ್ಮ ಎಸ್ ಬರೆದು, ಜತಿನ್ ದರ್ಶನ್ ಸಂಗೀತ ನೀಡಿರುವ ಈ ಹಾಡನ್ನು ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಹಾಗೂ ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಶೇಷು ಅವರ ನೃತ್ಯ ನಿರ್ದೇಶನದಲ್ಲಿ ಸ್ಟೆಪ್ ಆಫ್ ಲೋಕಿ ಹಾಗೂ ಆರೋಹಿತ ಗೌಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಗ್ರಾಮೀಣ ಸುಂದರ ಪರಿಸರದಲ್ಲಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ನಿರ್ಮಿಸಿರುವ ಈ ಚಿತ್ರಕ್ಕೆ ಚಂದ್ರಮೋಹನ್ ಸಿ ಎಲ್, ರಮೇಶ್ ರಾಮಚಂದ್ರ , ಪದ್ಮನಾಭನ್ ಮಂಗುದೊಡ್ಡಿ ಅವರ ಸಹ ನಿರ್ಮಾಣವಿದೆ. ರಶ್ಮಿತ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ಹಿಹಿಸಿದ್ದಾರೆ.
ಹಲವು ಚಿತ್ರಗಳಲ್ಲಿ ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ದೇಶಕರು ಆಗಿ ಕೆಲಸ ಮಾಡಿ ಅನುಭವವಿರುವ ವಿಷ್ಣು ವಿ ಪ್ರಸನ್ನ "ಜಲಂಧರ" ಚಿತ್ರದ ನಿರ್ದೇಶಕರು. ರಂಗಭೂಮಿ ಹಿನ್ನೆಲೆಯಿರುವ ನಟ ಸ್ಟೆಪ್ ಆಫ್ ಲೋಕಿ "ಜಲಂಧರ" ಚಿತ್ರದ ಕಥೆ ಬರೆದಿದ್ದು, ಚಿತ್ರಕಥೆಯನ್ನು ವಿಷ್ಣು ವಿ ಪ್ರಸನ್ನ ಹಾಗೂ ಅಕ್ಷಯ್ ಕುಮಾರ್ ಬರೆದಿದ್ದಾರೆ. ಸಂಭಾಷಣೆ ಶ್ಯಾಮ್ ಸುಂದರ್ ಅವರದು. ಛಾಯಾಗ್ರಹಣವನ್ನು ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ ಎಸ್ ಹಾಗೂ ಸಂಪೂರ್ಣ ಸಂಗೀತ ನಿರ್ದೇಶನವನ್ನು ಯುವ ಸಂಗೀತ ನಿರ್ದೇಶಕ ಜಿ. ಜತಿನ್ ದರ್ಶನ್ ನಿರ್ವಹಿಸಿದ್ದಾರೆ, ವೆಂಕಿ ಯು ಡಿ ವಿ ಸಂಕಲನ ಮಾಡಿದ್ದಾರೆ.
ಪ್ರಮೋದ್ ಶೆಟ್ಟಿ, ಸ್ಟೆಪ್ ಆಫ್ ಲೋಕಿ, ರುಷಿಕಾ ರಾಜ್(ಟಗರು ಸರೋಜ), ಆರೋಹಿತಾ ಗೌಡ(ಅಧ್ಯಕ್ಷ) , ಬಲ ರಾಜ್ವಾಡಿ, ರಘು ರಾಮನಕೊಪ್ಪ , ನವೀನ್ ಸಾಗರ್ , ಪ್ರತಾಪ್ ನೆನಪು , ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ , ವಿಜಯರಾಜ್ , ಪ್ರಸಾದ್, ವಿಶಾಲ್ ಪಾಟೀಲ್ ಮತ್ತು ಅಂಬು "ಜಲಂಧರ್" ಚಿತ್ರದಲ್ಲಿ ಅಭಿನಯಿಸಿದ್ದಾರೆ.