ಬಿಡುಗಡೆ ಹೊಸ್ತಿಲಿನಲ್ಲಿರುವ ಆರಾಮ್ ಅರವಿಂದ್ ಸ್ವಾಮಿ ಸಿನಿಮಾ ಬಹುವಿಧವಾಗಿ ಪ್ರೇಕ್ಷಕರನ್ನು ಆವರಿಸುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಹಾಡುಗಳಂತೂ ಎಲ್ಲರ ಮೆಚ್ಚುಗೆ ಪಡೆದುಕೊಂಡಿವೆ. ಇದೀಗ ಆರಾಮ್ ಅರವಿಂದ್ ಸ್ವಾಮಿ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿದ್ದು, ಆರಂಭದಿಂದಲೂ ವಿಭಿನ್ನವಾಗಿ ಸಿನಿಮಾಪ್ರೇಮಿಗಳನ್ನು ಸೆಳೆಯುತ್ತಿರುವ ಚಿತ್ರತಂಡ, ಸಿನಿಮಾಸಕ್ತರಿಗೆ ಬಂಪರ್ ಆಫರ್ ಘೋಷಿಸಿದೆ.
99ರೂಗೆ ಟಿಕೆಟ್ ದರ ನಿಗದಿ;-
ಆರಾಮ್ ಅರವಿಂದ್ ಸ್ವಾಮಿ ಚಿತ್ರತಂಡ ಪ್ರೇಕ್ಷಕರನ್ನು ತಲುಪಲು ಮತ್ತೊಂದು ಪ್ರಯೋಗಕ್ಕೆ ಸೈ ಎಂದಿದೆ. ನವೆಂಬರ್ 22ಕ್ಕೆ ತೆರೆ ಬರ್ತಿರುವ ಸಿನಿಮಾಗೆ ಕೇವಲ 99 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಈ ಆಫರ್ ಮೊದಲ 3 ದಿನಗಳ ಕಾಲ ಮಾತ್ರ ಇರುತ್ತದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ಮಾಪಕ ಕಂ ವಿತರಕರಾದ ಜಯಣ್ಣ , ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ತರುಣ್ ಸುಧೀರ್, ನಟ ಯುವರಾಜ್ ಕುಮಾರ್ 99ರೂಪಾಯಿ ಕೊಟ್ಟು ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಟಿಕೆಟ್ ಖರೀದಿಸಿದ್ದಾರೆ.
ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಆರಾಮ್ ಅರವಿಂದ್ ಸ್ವಾಮಿ ಸಿನಿಮಾಗೆ 'ನಮ್ ಗಣಿ ಬಿಕಾಂ ಪಾಸ್', 'ಗಜಾನನ ಅಂಡ್ ಗ್ಯಾಂಗ್ ' ರೀತಿಯ ಇಂಟ್ರೆಸ್ಟಿಂಗ್ ಚಿತ್ರಗಳನ್ನು ಕಟ್ಟಿಕೊಟ್ಟಿದ್ದ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ಅನೀಶ್ ತೇಜೇಶ್ವರ್ ಕಂಪ್ಲೀಟ್ ಲವರ್ ಬಾಯ್ ಆಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಮಿಲನ ನಾಗರಾಜ್ ಹಾಗೂ ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಮಿಂಚಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿರುವ ಆರಾಮ್ ಅರವಿಂದ್ ಸ್ವಾಮಿ ಸಿನಿಮಾಗೆ ವೈವಿಬಿ ಶಿವಸಾಗರ್ ಛಾಯಾಗ್ರಹಣವಿದೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರ ನಿರ್ಮಾಣ ಮಾಡಿದ್ದಾರೆ.