image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿಸೆಂಬರ್ 4ಕ್ಕೆ ‘ಮ್ಯಾರೇಜ್ ಪಾರ್ಟಿ’ ತೆರೆಗೆ: ಕರಾವಳಿಯ ಕಾಮಿಡಿ-ಹಾಸ್ಯದ ರಸದೌತಣಕ್ಕೆ ಭರ್ಜರಿ ತಯಾರಿ

ಡಿಸೆಂಬರ್ 4ಕ್ಕೆ ‘ಮ್ಯಾರೇಜ್ ಪಾರ್ಟಿ’ ತೆರೆಗೆ: ಕರಾವಳಿಯ ಕಾಮಿಡಿ-ಹಾಸ್ಯದ ರಸದೌತಣಕ್ಕೆ ಭರ್ಜರಿ ತಯಾರಿ

ಮಂಗಳೂರು: ಚಯನ್ ಶೆಟ್ಟಿ ನಿರ್ದೇಶನದ ಹಾಗೂ ವಿನೀತ್ ಕುಮಾರ್ ನಾಯಕನಾಗಿ ನಟಿಸಿರುವ ‘ಮ್ಯಾರೇಜ್ ಪಾರ್ಟಿ’ ಸಿನಿಮಾ ಇದೇ ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಸಿನಿಮಾದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ವಿನೀತ್ ಕುಮಾರ್ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ.

 “ಮ್ಯಾರೇಜ್ ಪಾರ್ಟಿ ನನ್ನ ವೃತ್ತಿಜೀವನದ ಮೊದಲ ಕನ್ನಡ ನಾಯಕ ನಟನ ಸಿನಿಮಾ.  ಕರಾವಳಿಯ ಪರಿಚಿತ ಕಲಾವಿದರ ಜೊತೆ ಕೆಲಸ ಮಾಡಿದ್ದು ನನಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಜನರ ಗ್ರಹಿಕೆ ಬದಲಾಗಿದೆ; ಸಿನಿಮಾದಲ್ಲಿ ಏನೋ ವಿಶೇಷತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ” ಎಂದು ಹೇಳಿದರು.

ಸಿನಿಮಾದ ಕಾಮಿಡಿ ಅಂಶಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, “ಸಿನಿಮಾ ನೋಡಿದವರ ಪ್ರಕಾರ ಚಿತ್ರದುದ್ದಕ್ಕೂ ಹಾಸ್ಯ ಚೆನ್ನಾಗಿ ವರ್ಕೌಟ್ ಆಗಿದೆ. ಇಂದಿನ ಬಿಡುವಿಲ್ಲದ ಬದುಕಿನಲ್ಲಿ ಪ್ರೇಕ್ಷಕರಿಗೆ ಬೇಕಿರುವುದು ಉತ್ತಮ ಮನರಂಜನೆ ಮತ್ತು ನಗು. ಆ ಕೆಲಸವನ್ನು ‘ಮ್ಯಾರೇಜ್ ಪಾರ್ಟಿ’ ಡಿಸೆಂಬರ್ 4ರಂದು ಮಾಡಲಿದೆ” ಎಂದರು.

  “ನವೀನ್ ಪಡೀಲ್  ಈ ಸಿನಿಮಾವನ್ನು ತಮ್ಮ ಪಾತ್ರದ ಮೂಲಕ ಮುಂದಕ್ಕೆ ಕೊಂಡೊಯ್ಯುತ್ತಾರೆ. ಅವರ ಟ್ಯಾಲೆಂಟ್ ಅನ್ನು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನೋಡಬಹುದು.

ಇಡೀ ಚಿತ್ರತಂಡ ಒಂದು ಕುಟುಂಬದಂತೆ ಕೆಲಸ ಮಾಡಿದ್ದು, ಸಿನಿಮಾದ ಪಾಸಿಟಿವ್ ವಾತಾವರಣ ತೆರೆಯ ಮೇಲೂ ಮೂಡಿಬರಲಿದೆ” ಎಂದು ತಿಳಿಸಿದರು. ಈ ವರ್ಷ ತಮ್ಮ ಪಾಲಿಗೆ ಇದು ಮೂರನೇ ಸಿನಿಮಾವಾಗಿದ್ದು, ಈ ಹಿಂದಿನ ಚಿತ್ರಗಳಂತೆ ಈ ಚಿತ್ರವೂ ಪ್ರೇಕ್ಷಕರ ಆಶೀರ್ವಾದ ಪಡೆಯುವ ವಿಶ್ವಾಸವಿದೆ ಎಂದರು.


ಶ್ರೀ ವಾರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ವಿ ನಿರ್ಮಿಸಿರುವ ಈ ಚಿತ್ರದಲ್ಲಿ ವಿನೀತ್ ಕುಮಾರ್, ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಪುಷ್ಪರಾಜ್ ಬೋಳಾರ್,

ರಕ್ಷಿತಾ, ಅನನ್ಯ, ಜ್ಯೋತಿಷ್ ಶೆಟ್ಟಿ, ರಘು ಪಾಂಡೇಶ್ವರ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ಹಾಗೂ ನಿತಿನ್ ಶೆಟ್ಟಿ ಸಂಕಲನ ಈ ಚಿತ್ರಕ್ಕಿದೆ.

Category
ಕರಾವಳಿ ತರಂಗಿಣಿ