image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪದ್ಮನಾಭ ಆ್ಯಂಡ್ ಫ್ಯಾಮಿಲಿ ಚಿತ್ರದ ಟೀಸರ್ ಅನಾವರಣ: ಜನವರಿ 15 ರಂದು ರಾಜ್ಯಾದ್ಯಂತ ತೆರೆಗೆ

ಪದ್ಮನಾಭ ಆ್ಯಂಡ್ ಫ್ಯಾಮಿಲಿ ಚಿತ್ರದ ಟೀಸರ್ ಅನಾವರಣ: ಜನವರಿ 15 ರಂದು ರಾಜ್ಯಾದ್ಯಂತ ತೆರೆಗೆ

ಮಂಗಳೂರು: ನವದುರ್ಗ ಫಿಲ್ಮ್ಸ್ ಲಾಂಛನದಲ್ಲಿ, ಕೊಡುಗೈ ದಾನಿ ಹಾಗೂ ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರ ನಿರ್ಮಾಣ ಮತ್ತು ಇಸ್ಮಾಯಿಲ್ ಮೂಡುಶೆಡ್ಡೆ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಕನ್ನಡ ಚಲನಚಿತ್ರ 'ಪದ್ಮನಾಭ ಆ್ಯಂಡ್ ಫ್ಯಾಮಿಲಿ'ಯ ಟೀಸರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಮಂಗಳೂರಿನ ಭಾರತ್ ಮಾಲ್‌ನ ಭಾರತ್ ಸಿನಿಮಾಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಸಿನಿಮಾದ ಟೀಸರ್ ಮತ್ತು ಹಾಡನ್ನು ಪ್ರದರ್ಶಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಣ ಮೇಲ್ವಿಚಾರಕಿ ಹಾಗೂ ಅಭಿಮತ ಟಿವಿಯ ಮುಖ್ಯಸ್ಥೆ ಡಾ. ಮಮತಾ ಪಿ. ಶೆಟ್ಟಿ ಅವರು, "ಸಿನಿಮಾ ಹಲವು ಕುಟುಂಬಗಳಿಗೆ ಆಸರೆಯಾಗಿದ್ದು, ನಿರ್ಮಾಪಕರು ಕಲಾವಿದರಿಗೆ ಅನ್ನದಾತರಾಗಿದ್ದಾರೆ. ಈ ಸಿನಿಮಾಕ್ಕೆ 54 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ನಿರ್ಮಾಪಕರಾದ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರು ಚಿತ್ರತಂಡಕ್ಕೆ ಯಾವುದೇ ರೀತಿಯ ಕೊರತೆ ಬಾರದಂತೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಮಾಜ ಸೇವೆಯ ಜೊತೆಗೆ ಸಿನಿಮಾ ರಂಗದ ಬಗ್ಗೆ ಕಾಳಜಿ ವಹಿಸಿ, ಕಲಾವಿದರ ಕಷ್ಟಸುಖಗಳಿಗೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು ಸತತ ನಾಲ್ಕು ವರ್ಷಗಳಿಂದ ಒಬ್ಬ ಉತ್ತಮ ನಿರ್ಮಾಪಕರಿಗಾಗಿ ಕಾದು ಕುಳಿತಿದ್ದರು. ಅವರ ಕಾಯುವಿಕೆಗೆ ಈಗ ಫಲ ದೊರೆತಿದ್ದು, ಈ ಚಿತ್ರದಿಂದ ಅವರ ಅದೃಷ್ಟ ಬದಲಾಗಲಿದೆ" ಎಂದು ಶುಭ ಹಾರೈಸಿದರು.

ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ, "ನಾನು ಈವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಒಂದು ಒಳ್ಳೆಯ ಕಥೆಯನ್ನು ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದಾಗ ಆಕಸ್ಮಿಕವಾಗಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರ ಪರಿಚಯವಾಯಿತು. ಅವರಿಗೆ ಕಥೆ ಇಷ್ಟವಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಕುಟುಂಬ ಸಮೇತ ಕುಳಿತು ನೋಡುವಂತಹ ಉತ್ತಮ ಹಾಸ್ಯಮಯ ಚಿತ್ರವನ್ನು ನಿರ್ಮಿಸಿದ್ದೇವೆ. ಜನವರಿ 15 ರಂದು ಸಿನಿಮಾ ರಾಜ್ಯಾದ್ಯಂತ ಹಾಗೂ ಕಾಸರಗೋಡು ಜಿಲ್ಲೆಯಲ್ಲೂ ತೆರೆಕಾಣಲಿದ್ದು, ಎಲ್ಲರ ಪ್ರೋತ್ಸಾಹ ಅಗತ್ಯ" ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಚಿತ್ರದ ಟೀಸರ್ ಹಾಗೂ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಇಸ್ಮಾಯಿಲ್ ಅವರು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಈ ಎರಡನೇ ಸಿನಿಮಾ ಕೂಡ ಜನರ ಮನಗೆಲ್ಲಲಿ ಎಂದು ಹಾರೈಸಿದರು. ಪಣಂಬೂರು ಠಾಣಾ ಇನ್ಸ್‌ಪೆಕ್ಟರ್ ಸಲೀಮ್ ಅಬ್ಬಾಸ್ ವಲಾಲ್ ಮಾತನಾಡಿ, ಟೀಸರ್ ಗುಣಮಟ್ಟ ಅದ್ಭುತವಾಗಿದ್ದು, ನಿರ್ದೇಶಕರು ಮತ್ತು ನಿರ್ಮಾಪಕರು ಪ್ರೇಕ್ಷಕರಿಗೆ ಒಂದು ಒಳ್ಳೆಯ ಸಿನಿಮಾವನ್ನು ನೀಡಿದ್ದಾರೆ ಎಂದರು. ನ್ಯಾಯವಾದಿ ಅರುಣ್ ಬಂಗೇರ ಅವರು ಟೀಸರ್ ಮೆಚ್ಚಿ ಚಿತ್ರದ ಯಶಸ್ಸಿಗೆ ಶುಭ ಕೋರಿದರು.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಒಂದು ವಿಶೇಷ ಹಾಡಿನ ಚಿತ್ರೀಕರಣಕ್ಕಾಗಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಹಾಡು ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಹೊಸ ಕಲಾವಿದರಿಗೂ ಚಿತ್ರದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಎ.ಕೆ. ಕಾರ್ಲ ಅವರು ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.
ಚಿತ್ರದ ತಾರಾಗಣದಲ್ಲಿ ದೀಪಕ್ ರೈ ಪಾಣಾಜೆ, ಬಿಗ್ ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ, ಹೃದನ್ ಶೆಟ್ಟಿ, ಮಾನಸಿ ಸುಧೀರ್, ಮೈಮ್ ರಾಮ್‌ದಾಸ್ ಸೇರಿದಂತೆ ಕರಾವಳಿಯ ಹೆಸರಾಂತ ಹಾಸ್ಯ ಕಲಾವಿದರಾದ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ರವಿ ರಾಮಕುಂಜ, ಪುಷ್ಪರಾಜ ಬೊಳ್ಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಅನಿಲ್ ರಾಜ್ ಉಪ್ಪಳ, ಸಾಯಿಕೃಷ್ಣ ಹಾಗೂ ಸತೀಶ್ ಬಂದಲೆ ಅಭಿನಯಿಸಿದ್ದಾರೆ. ಮಣಿಕಾಂತ್ ಕದ್ರಿ ಮತ್ತು ಸಮೀರ್ ಮುಡಿಪು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಚಂದು ಮೆಪ್ಪಯೂರ್ ಅವರ ಛಾಯಾಗ್ರಹಣವಿದೆ.

ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ತಮ್ಮ ಲಕ್ಷ್ಮಣ್, ಅಡ್ಯಾರ್ ಮಾಧವ ನಾಯ್ಕ್, ಸತೀಶ್ ಬಂದಲೆ, ಪಮ್ಮಿ ಕೊಡಿಯಾಲ್ ಬೈಲ್, ಡಾ. ಅಬೂಬಕರ್ ಸಿದ್ದಿಕ್ ಅಡ್ಡೂರು, ಡಾ. ಕಿರಣ್ ಕುಮಾರ್, ಎನ್. ನಾಗರಾಜ್, ಶರಣ್ ರಾಜ್ ಕಾಸರಗೋಡು, ನಿತಿನ್ ರೈ ಕುಕ್ಕುವಳ್ಳಿ, ಪತ್ರಕರ್ತರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಬಾಳ ಜಗನ್ನಾಥ ಶೆಟ್ಟಿ, ಶಮೀರ್ ಮುಡಿಪು ಹಾಗೂ ಎ.ಕೆ. ಕಾರ್ಲ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಷಷ್ಠೀಶ್ ಪಿ. ಶೆಟ್ಟಿ ಸ್ವಾಗತಿಸಿದರೆ, ವಿಜೆ ವಿಖ್ಯಾತ್ ಕಾರ್ಯಕ್ರಮವನ್ನು  ನಿರೂಪಿಸಿದರು.

Category
ಕರಾವಳಿ ತರಂಗಿಣಿ