ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಬಾಕ್ಸ್ ಆಫೀಸ್ ಯಶಸ್ಸು ಕಂಡ ಅಪರೂಪದ ಚಲನಚಿತ್ರಗಳಲ್ಲಿ ಮನೋಜ್ ಕುಮಾರ್ ಸಾರಥ್ಯದ 'ಪ್ರೇಮದ ಊರಾಲಿ' ಮುಂಚೂಣಿಯಲ್ಲಿದೆ. ಆರಂಭದಲ್ಲಿ ಅತ್ಯಂತ ಸಾಧಾರಣವಾಗಿ ಚಿತ್ರಮಂದಿರಗಳಿಗೆ ಆಗಮಿಸಿ, ತದನಂತರ ಬೆಳ್ಳಿಪರದೆಯ ಮೇಲೆ ಕಲೆಕ್ಷನ್ ಸೌಂಡ್ ಸೃಷ್ಟಿಸಿದ ಈ ಸಿನಿಮಾ, ಈಗ ಡಿಜಿಟಲ್ ಲೋಕದಲ್ಲೂ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಬೆಳ್ಳಿಪರದೆಯ ಮೇಲೆ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಾಗತಿಕ ಮಟ್ಟದ ಮುಂಚೂಣಿ ಒಟಿಟಿ ಸಂಸ್ಥೆಯಾದ ಪ್ರೈಮ್ ವಿಡಿಯೋ ಅತ್ಯುತ್ತಮ ಮೊತ್ತಕ್ಕೆ ಪಡೆದುಕೊಂಡಿದೆ. ನವೆಂಬರ್ 17 ರಿಂದ ಈ ಸಿನಿಮಾ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ಪ್ರಥಮ ಪ್ರದರ್ಶನಗೊಳ್ಳುತ್ತಿದ್ದು, ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಸಾಧ್ಯವಾಗದವರಿಗೂ ಹಾಗೂ ಒಟಿಟಿ ಪ್ರೇಕ್ಷಕರಿಗೂ ಮನೆಯಲ್ಲಿಯೇ ಕುಳಿತು ಈ ಕಥೆಯನ್ನು ಆನಂದಿಸುವ ಅವಕಾಶ ದೊರೆತಿದೆ.
ಈ ಚಿತ್ರದ ಬಾಕ್ಸ್ ಆಫೀಸ್ ಪ್ರಯಾಣವು ಕನ್ನಡ ಚಿತ್ರರಂಗಕ್ಕೇ ಮಾದರಿಯಾಗಿದೆ. ಯಾವುದೇ ಭಾರಿ ಪ್ರಚಾರವಿಲ್ಲದೆ ಸರಳವಾಗಿ ಬಿಡುಗಡೆಗೊಂಡ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಬಂದ ಧನಾತ್ಮಕ ವಿಮರ್ಶೆಗಳು ದೊಡ್ಡ ಬಲ ತಂದುಕೊಟ್ಟವು. ವಾರದಿಂದ ವಾರಕ್ಕೆ ಥಿಯೇಟರ್ಗಳಲ್ಲಿ ಜನಸಂದಣಿ ಹೆಚ್ಚಾಗಿ, ಸತತವಾಗಿ 50 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದ ಈ ಸಿನಿಮಾ ₹150 ಕೋಟಿಗಳ ಗಡಿ ದಾಟಿ ಹೊಸ ದಾಖಲೆ ಬರೆದಿದೆ. ಚಿತ್ರದ ಈ ಅಭೂತಪೂರ್ವ ಯಶಸ್ಸಿಗೆ ಪ್ರಮುಖ ಕಾರಣ ಅದ್ಭುತ ಪಾತ್ರವರ್ಗ ಮತ್ತು ಕೌಟುಂಬಿಕ ಕಥಾಹಂದರ. ಕನ್ನಡ ಚಿತ್ರರಂಗದ ಹಿರಿಯ ನಟ ರಂಗಾಯಣ ರಘು, ನಾಯಕ ನಟ ಶ್ರೀ ರಾಮ್, ನಾಯಕಿ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಇಳಾ ವಿಟ್ಲ, ಗೋವಿಂದೇ ಗೌಡ, ದೇವೇಂದ್ರ ನಾಯ್ಡು, ಅಭಿಷೇಕ್ ಕಲ್ಮನಿ, ಸುವಿಶ್ ಹಾಗೂ ಅಭಿ ಮಹೇಶ್ ಮುಂತಾದ ಪ್ರತಿಭಾನ್ವಿತ ಕಲಾವಿದರು ಅಭಿನಯಿಸಿದ್ದಾರೆ.
ವೆನಿಲ್ಲಾ ಎಂಟರ್ಟೈನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ಗಳ ಅಡಿಯಲ್ಲಿ ಮಮತಾ ದೇವೇಂದ್ರ, ಪ್ರಶಾಂತ ಡಿ.ಎಸ್. ಮತ್ತು ರಮೇಶ ಎನ್. ಈ ಚಿತ್ರವನ್ನು ನಿರ್ಮಿಸಿದ್ದು, ಜಯಣ್ಣ ಪ್ರೊಡಕ್ಷನ್ ರಾಜ್ಯಾದ್ಯಂತ ವಿತರಣೆ ಮಾಡಿತ್ತು. ರಾಜ್ಕಾಂತ್ ಎಸ್.ಕೆ. ಅವರ ದೃಶ್ಯ ಸಂಯೋಜನೆ, ಸುನಾದ್ ಗೌತಮ್ ಅವರ ಸಂಗೀತ ಹಾಗೂ ಹರ್ಷಿತ್ ಪ್ರಭು ಅವರ ಸಂಕಲನ ಚಿತ್ರದ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿವೆ.