ಮಂಗಳೂರು: ತುಳುನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆ, ದೈವಾರಾಧನೆ ಹಾಗೂ ಕೃಷಿ ಪ್ರಧಾನ ಕುಟುಂಬದ ಸಾಂಸಾರಿಕ ಬದುಕಿನ ಕಥಾಹಂದರವನ್ನು ಒಳಗೊಂಡಿರುವ ಬಹುನಿರೀಕ್ಷಿತ ತುಳು ಚಲನಚಿತ್ರ 'ಬೆಲ್ಲದಗಟ್ಟಿ' ಇದೇ ನವೆಂಬರ್ 20ರಂದು ಕರಾವಳಿಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಚಲನಚಿತ್ರಗಳು ನಿರ್ಮಾಣವಾಗುತ್ತಿದ್ದು, ಕರಾವಳಿ ಭಾಗದಲ್ಲಿ ಕನ್ನಡದ ಜೊತೆಗೆ ತುಳು ಹಾಗೂ ಕೊಂಕಣಿ ಭಾಷೆಯ ಸಿನಿಮಾಗಳು ಕಲಾ ಪ್ರೇಕ್ಷಕರ ಮನಗೆಲ್ಲುತ್ತಿವೆ. ರಾಜ್ಯ ಸರ್ಕಾರವು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಿರುವ ಈ ಮಹತ್ವದ ಸಂದರ್ಭದಲ್ಲಿ, ತುಳು ಭಾಷಾ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ.
ಕಟೀಲ್ ಪ್ರಸಾದ್ ಪ್ರೊಡಕ್ಷನ್ಸ್ ಕಟಪಾಡಿ ಲಾಂಛನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಉದಯೋನ್ಮುಖ ನಟಿ ಹಾಗೂ ನಿರ್ದೇಶಕ ರಾಜಾ ಕಟಪಾಡಿ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ರಾಮಕೃಷ್ಣ ಹಾಗೂ ಸುಜೀರ್ ಬಾಡಿಲಾ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ತಮ್ಮದೇ ನಾಟಕ ತಂಡಗಳ ಪ್ರತಿಭಾವಂತ ಕಲಾವಿದರಿಗೆ ಬೆಳ್ಳಿತೆರೆಯಲ್ಲಿ ಉತ್ತಮ ಅವಕಾಶ ಒದಗಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪ್ರಜ್ವಲ್ ಸುವರ್ಣ ಅವರ ಛಾಯಾಗ್ರಹಣ ಮತ್ತು ಸಂಕಲನ, ಸಂದೇಶ್ ಬಾಬಣ್ಣ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಸಮನ್ರಿ ರೈ ಪುತ್ತೂರು ಹಾಗೂ ಕೆ. ಪಿ. ಮಿಲನ್ ಹಿನ್ನೆಲೆ ಗಾಯನ ನೀಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು/ಎ' (U/A) ಪ್ರಮಾಣಪತ್ರ ದೊರೆತಿದೆ.
ಕೃಷಿ ಪ್ರಧಾನ ಕುಟುಂಬದ ಸಾಂಸಾರಿಕ ಜೀವನದ ಪರಿಕಲ್ಪನೆಯನ್ನು ಹೊಂದಿರುವ 'ಬೆಲ್ಲದಗಟ್ಟಿ' ಚಿತ್ರದಲ್ಲಿ ತುಳುನಾಡಿನ ಹಿರಿಯರ ಆಚರಣೆಗಳು, ಕೃಷಿ ಚಟುವಟಿಕೆಗಳು, ದೈವಾರಾಧನೆ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಅತ್ಯಂತ ನೈಜವಾಗಿ ಅಳವಡಿಸಲಾಗಿದೆ. ಪರಂಪರಾಗತ ಧಾರ್ಮಿಕ-ಜಾನಪದ ಆಚರಣೆಗಳು ಹಾಗೂ ಪ್ರಾಮಾಣಿಕ ಶ್ರಮದಾಯಕ ಜೀವನಪದ್ಧತಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ತಪ್ಪು ಕಲ್ಪನೆಯಿಂದ ದೈವದ ಮುಂದೆ ಪ್ರಮಾಣ ಮಾಡುವುದರಿಂದ ಕುಟುಂಬದಲ್ಲಿ ಉಂಟಾಗುವ ಸಂಕಷ್ಟಗಳು, ಅದರ ಸುತ್ತ ಹೆಣೆದ ರೋಚಕ ತಿರುವುಗಳು ಹಾಗೂ ತಪ್ಪಿನ ಅರಿವಾಗಿ ತಪ್ಪು-ಸರಿಯ ನಡುವೆ ನಡೆಯುವ ಸಾಂಸಾರಿಕ ಜೀವನಮೌಲ್ಯಗಳ ಸಂಘರ್ಷವೇ ಚಿತ್ರದ ಮುಖ್ಯ ಕಥಾಹಂದರವಾಗಿದೆ.
ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳನ್ನು ಕಂಡಿರುವ ಈ ಚಿತ್ರ, ಅಲ್ಲಿನ ಅನಿವಾಸಿ ತುಳುವರು ಹಾಗೂ ಕಲಾಭಿಮಾನಿಗಳಿಂದ ಹಾರ್ದಿಕ ಮೆಚ್ಚುಗೆ ಮತ್ತು ಪ್ರಶಂಸೆ ಪಡೆದುಕೊಂಡಿದೆ. ಅಲ್ಲದೆ, ಉಡುಪಿ, ಮಣಿಪಾಲ ಹಾಗೂ ಮಂಗಳೂರಿನಲ್ಲಿ ನಡೆದ ವಿಶೇಷ ಪ್ರೀಮಿಯರ್ ಪ್ರದರ್ಶನಗಳಲ್ಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಜನಮನ್ನಣೆ ಗಳಿಸಿರುವುದು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನವೆಂಬರ್ 20ರಂದು ಬೆಳಿಗ್ಗೆ 9.30ಕ್ಕೆ ಉಡುಪಿಯ ಟೈಮ್ಸ್ ಸ್ಕ್ವೇರ್ ಮಾಲ್ನ ಭಾರತ್ ಸಿನಿಮಾಸ್ನಲ್ಲಿ ಚಿತ್ರದ ಉದ್ಘಾಟನಾ ಪ್ರದರ್ಶನ ನೆರವೇರಲಿದೆ.