'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ ಹಾಗೂ 'ಪ್ರೇಮದ ಊರಲಿ' ಚಿತ್ರದ ಮೂಲಕ ಗಮನ ಸೆಳೆದಿರುವ ತಪಸ್ವಿನಿ ಪೂಣಚ್ಛ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ 'ಮಿಸ್ಟರ್ ಜಾಕ್' ಸಿನಿಮಾ ಇದೀಗ ಬಿಡುಗಡೆಯ ಹಂತಕ್ಕೆ ತಲುಪಿದೆ. ಹಾಸ್ಯ ಹಾಗೂ ಪೂರ್ಣ ಪ್ರಮಾಣದ ಮನರಂಜನೆಯ ಸಮ್ಮಿಲನದೊಂದಿಗೆ ಮೂಡಿಬಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡಲು ಸಂಪೂರ್ಣ ಸಜ್ಜಾಗಿದೆ.
ಮಂಡಿಮನೆ ಟಾಕೀಸ್ ಲಾಂಛನದಲ್ಲಿ ನಟ ಗುರುನಂದನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆಗೂಡಿ ಈ ಚಿತ್ರವನ್ನು ನಿರ್ಮಿಸಿದ್ದು, ಸುಮಂತ್ ಗೌಡ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಆರಂಭದಿಂದಲೂ ಕುತೂಹಲ ಮೂಡಿಸಿರುವ ಈ ಚಿತ್ರದ ಮೊದಲ ಹಾಡು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಗಳಿಸಿತ್ತು. ತದನಂತರ ದಸರಾ ಹಬ್ಬದ ಶುಭಸಮಯದಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾದ ಮತ್ತೊಂದು ಹಾಡು ಹಾಗೂ ಟೀಸರ್ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಿರಣ್ ರವೀಂದ್ರನಾಥ್ ಅವರ ಸುಮಧುರ ಸಂಗೀತ ಸಂಯೋಜನೆ ಮತ್ತು ಹೆಸರಾಂತ ಸಾಹಿತಿಗಳ ಸಾಹಿತ್ಯ ಚಿತ್ರದ ಹಾಡುಗಳಿಗೆ ಮೆರುಗು ತಂದಿದೆ.
ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ ಕಾಡೂರ್ ಹಾಗೂ ಸುಶ್ಮಿತ ಜಗ್ಗಪ್ಪ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ತಾರಾಗಣವಿದೆ. ಚಿತ್ರಕ್ಕೆ ಶಿವಸೇನ ಛಾಯಾಗ್ರಹಣ, ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಹಾಗೂ ವಿಜಯ್ ರಾಜ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಚಿತ್ರತಂಡದ ಮಾಹಿತಿ ಪ್ರಕಾರ, ಸಿನಿಮಾದ ಬಿಡುಗಡೆಗೆ ಪೂರ್ವಭಾವಿಯಾಗಿ ನವೆಂಬರ್ 15ರಂದು ಬೆಂಗಳೂರಿನ ಓರಾಯನ್ ಮಾಲ್ನಲ್ಲಿ ಅದ್ಧೂರಿ ಟ್ರೇಲರ್ ಅನಾವರಣ ಹಾಗೂ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು, ನಟ-ನಟಿಯರು, ನಿರ್ದೇಶಕರು ಹಾಗೂ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಸಂಪೂರ್ಣ ಮನರಂಜನಾತ್ಮಕ ಕಥಾಹಂದರ ಹೊಂದಿರುವ 'ಮಿಸ್ಟರ್ ಜಾಕ್' ಚಿತ್ರವು ಡಿಸೆಂಬರ್ 4ರಂದು ರಾಜ್ಯಾದ್ಯಂತ ಪಾವಿತ್ಯಪೂರ್ಣವಾಗಿ ಪ್ರದರ್ಶನ ಕಾಣಲಿದೆ.