ಮಂಗಳೂರು: ಕರಾವಳಿಯ ಖ್ಯಾತ ಹಾಸ್ಯ ಕಲಾವಿದರ ಬಳಗ ಒಂದಾಗಿ ಅಭಿನಯಿಸಿರುವ, ಬಹುನಿರೀಕ್ಷಿತ 'ವಾದಿರಾಜ ವಾಲಗ ಮಂಡಳಿ' (ವಿವಿಎಂ) ಕನ್ನಡ ಚಲನಚಿತ್ರದ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಚಿತ್ರದ ಮೊದಲ ನೋಟದ ಪೋಸ್ಟರನ್ನು ಅನಾವರಣಗೊಳಿಸಲಾಗಿದೆ. ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ನಿರ್ಮಾಪಕ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರವನ್ನು ಡಿಸೆಂಬರ್ ಕೊನೆಯಲ್ಲಿ ಬೆಳ್ಳಿಪರದೆಗೆ ತರಲು ನಿರ್ಧರಿಸಿರುವುದಾಗಿ ಘೋಷಿಸಿದರು.
ಈ ಹಿಂದೆ 'ಗಲಾಟೆ' ಚಲನಚಿತ್ರ ಹಾಗೂ ಜನಪ್ರಿಯ 'ಜೋಗುಳ' ಧಾರಾವಾಹಿಯನ್ನು ತಂದಿದ್ದ ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್, ಗುಣಮಟ್ಟದ ಹಾಗೂ ಉತ್ತಮ ಅಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಹಾದಿಯಲ್ಲಿ ಈ ಹೊಸ ಹೆಜ್ಜೆ ಇಟ್ಟಿದೆ.
ಬ್ರಹ್ಮಾವರ, ಮಂಗಳೂರು, ಮುಲ್ಕಿ ಮತ್ತು ಕಾಸರಗೋಡು ಮುಂತಾದ ನೈಸರ್ಗಿಕ ಸುಂದರ ಪರಿಸರಗಳಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಸಂಪೂರ್ಣವಾಗಿ ಕರಾವಳಿ ಕನ್ನಡದ ಪ್ರಾದೇಶಿಕ ಶೈಲಿ ಹಾಗೂ ಸೊಗಡನ್ನು ಮೈಗೂಡಿಸಿಕೊಂಡಿರುವ ಈ ಚಿತ್ರವು, ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ಪಕ್ಕಾ ಹಾಸ್ಯಮಯ ಮನರಂಜನಾತ್ಮಕ ಕಥಾಹಂದರವನ್ನು ಹೊಂದಿದೆ.
ಚಿತ್ರದಲ್ಲಿ ಕರಾವಳಿಯ ಅತ್ಯಂತ ಜನಪ್ರಿಯ ಕಲಾವಿದರ ದೊಡ್ಡ ಪಡೆಯೇ ಇದೆ. 'ಗುಂಡುಮಾಮ' ಖ್ಯಾತಿಯ ನವೀನ್ ಡಿ. ಪಡೀಲ್, 'ಸು ಫ್ರಮ್ ಸೊ' ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳೂರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು ಹಾಗೂ ಲಕ್ಷ್ಮಣ ಮಲ್ಲೂರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಹಾಗೂ ತನ್ವಿ ರಾವ್ ಮತ್ತು ವೇನ್ಯ ರೈ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.
ಚೆನ್ನೈನ ಪ್ರಸಿದ್ಧ ಛಾಯಾಗ್ರಾಹಕ ಎಸ್. ಚಂದ್ರಶೇಖರನ್ ಛಾಯಾಗ್ರಹಣ ನಿರ್ವಹಿಸಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಸ್ಟಂಟ್ ಶಿವು ಸಾಹಸ ನಿರ್ದೇಶನ ಹಾಗೂ ವಿನಾಯಕ ಆಚಾರ್ಯ ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರಸಿದ್ಧ ಕಲಾವಿದ ದೇವಿ ಪೋಸ್ಟರ್ಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದಾರೆ.
ವಿಶೇಷ ಕಥೆ ಮತ್ತು ನಿರ್ದೇಶನ
ವಿಶ್ವಪ್ರಸಿದ್ಧ 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡಿನ ಮೂಲಕ ಮನೆಮಾತಾಗಿರುವ ನಟ, ನಿರ್ದೇಶಕ ಹಾಗೂ ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ. ಜಯಪ್ರಕಾಶ್ ತುಂಬೆ ಸಹ-ನಿರ್ಮಾಪಕರಾಗಿ ಬೆಂಬಲ ನೀಡಿದ್ದು, ಸಂತೋಷ್ ಶೆಟ್ಟಿ ಹಾಗೂ ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಶ್ರಮಿಸಿದ್ದಾರೆ.
ಸಂಗೀತಕ್ಕೆ ವಿಶೇಷ ಒತ್ತು ನೀಡಿರುವ ಈ ಸಿನಿಮಾದಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ಇವುಗಳಲ್ಲಿ ಐದು ಪೂರ್ಣ ಪ್ರಮಾಣದ ಹಾಡುಗಳಾಗಿದ್ದರೆ, ನಾಲ್ಕು ತುಣುಕು ಹಾಡುಗಳಾಗಿವೆ. ಬ್ರಹ್ಮಕಲಶ ಹಾಡಿನ ಕೆನಡಾ ಮೂಲದ ಅಭಿ ವಿ, ವರಾಹರೂಪಂ ಖ್ಯಾತಿಯ ಚೆನ್ನೈನ ಸಾಯಿವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಹಾಗೂ ಮಣಿಕಾಂತ್ ಕದ್ರಿ ಧ್ವನಿಯಾಗಿದ್ದಾರೆ.
ಚಿತ್ರವು ಸಂಪೂರ್ಣವಾಗಿ ತೆರೆಗೆ ಬರಲು ಸಿದ್ಧವಾಗಿದ್ದರೂ, ಇತರ ಸಿನಿಮಾಗಳಿಗೆ ಅನಗತ್ಯ ಸ್ಪರ್ಧೆಯಾಗಬಾರದು ಎಂಬ ಉದ್ದೇಶದಿಂದ ಡಿಸೆಂಬರ್ ಅಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ.