ಮುಂಬೈ : ನಿವೇದಕ್ ನಮಿತ್ ಮಲ್ಹೋತ್ರಾ ನಿರ್ಮಾಣದ ಹಾಗೂ ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಎರಡು ಭಾಗಗಳಿಗೆ ಸುಮಾರು 4,000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬ ವರದಿಗಳು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಈ ವಿಚಾರವಾಗಿ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಮುಂಬರುವ ‘ಮಾತೃಭೂಮಿ’ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯದ ನಿಜವಾದ ಮೌಲ್ಯವನ್ನು ನೆನಪಿಸಿದರು. "ರಾಮಾಯಣ ಸಿನಿಮಾವನ್ನು ಅದರ ಕಥೆ, ಶ್ರೀರಾಮ, ಸೀತೆ ಹಾಗೂ ರಾವಣನಂತಹ ಪವಿತ್ರ ಪಾತ್ರಗಳ ಆಧಾರದ ಮೇಲೆ ಚರ್ಚಿಸಬೇಕೇ ಹೊರತು, ತಗುಲಿದ ನಿರ್ಮಾಣ ವೆಚ್ಚ ಅಥವಾ ವಿಎಫ್ಎಕ್ಸ್ ಆಧಾರದ ಮೇಲಲ್ಲ. 4,000 ಕೋಟಿ ಬಜೆಟ್ ಮತ್ತು ವಿಎಫ್ಎಕ್ಸ್ ಅನ್ನೇ ಮುಖ್ಯ ವಿಷಯವನ್ನಾಗಿ ಮಾಡುವುದು ಸರಿಯಲ್ಲ" ಎಂದು ಅವರು ಪ್ರತಿಪಾದಿಸಿದರು.
ಇದೇ ವೇಳೆ ಶ್ರೀರಾಮನ ಗುಣಗಳನ್ನು ಸ್ಮರಿಸಿದ ಸಲ್ಮಾನ್ ಖಾನ್, ತಮ್ಮ ‘ಮಾತೃಭೂಮಿ’ ಚಿತ್ರದ ನಾಯಕನ ಪಾತ್ರಕ್ಕೂ ಶ್ರೀರಾಮನ ಆದರ್ಶಗಳಿಗೂ ಹೋಲಿಕೆ ಮಾಡಿದರು. "ಶ್ರೀರಾಮನಲ್ಲಿ ಶ್ರೇಷ್ಠ ಮಗ, ಶ್ರೇಷ್ಠ ಪತಿ, ಶ್ರೇಷ್ಠ ಸಹೋದರ ಹಾಗೂ ಅತ್ಯುತ್ತಮ ಯೋಧನ ಗುಣಗಳಿದ್ದವು. ನನ್ನ ಮುಂಬರುವ ಸಿನಿಮಾದ ಪಾತ್ರದಲ್ಲೂ ಸಹ ಇಂತಹದೇ ಅದ್ಭುತ ಗುಣಗಳನ್ನು ಕಾಣಬಹುದು" ಎಂದು ವಿವರಿಸಿದರು.
ತಮ್ಮ ಹಳೆಯ ನೆನಪೊಂದನ್ನು ಹಂಚಿಕೊಂಡ ಸಲ್ಲು, ಸುಮಾರು 20 ವರ್ಷಗಳ ಹಿಂದೆ ತಾವು ಮತ್ತು ತಮ್ಮ ಸಹೋದರ ರಾಮಾಯಣ ಆಧರಿತ ಸಿನಿಮಾದಲ್ಲಿ ನಟಿಸಬೇಕಿತ್ತು ಎಂದರು. "20 ವರ್ಷಗಳ ಹಿಂದೆ ನಾವು ರಾಮಾಯಣ ಸಿನಿಮಾ ಮಾಡಲು ನಿರ್ಧರಿಸಿದ್ದೆವು. ಆದರೆ ಸಿನಿಮಾ ಪ್ರಕಟಿಸಿ ತಡರಾತ್ರಿ ಹೊರಬಂದ ನಮ್ಮ ಫೋಟೋಗಳಿಗೆ ಅಂದಿನ ಮಾಧ್ಯಮಗಳು ತಲೆಗೆ ಕಿರೀಟ ಹಾಕಿ 'ಇವರೇ ನಮ್ಮ ರಾಮ-ಲಕ್ಷ್ಮಣ' ಎಂದು ಬರೆದಿದ್ದವು. ಆ ವರದಿಯನ್ನು ನೋಡಿ ನಾವು ಆ ಯೋಜನೆಯನ್ನೇ ಕೈಬಿಟ್ಟಿದ್ದೆವು" ಎಂದು ಹಳೆಯ ಪ್ರಸಂಗವನ್ನು ನೆನಪಿಸಿಕೊಂಡರು.
ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಸಿನಿಮಾ ಆರಂಭದಲ್ಲಿ ನವೆಂಬರ್ 20 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಗ್ರಾಫಿಕ್ಸ್ ಹಾಗೂ ವಿಎಫ್ಎಕ್ಸ್ ಕೆಲಸಗಳು ಬಾಕಿ ಇದ್ದಿದ್ದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈಗ ಈ ಬಹುನಿರೀಕ್ಷಿತ ಚಿತ್ರವು ಡಿಸೆಂಬರ್ 4ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.