ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹಾಗೂ ಭಾವನಾತ್ಮಕ ಕಥಾಹಂದರದ ಮೂಲಕ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ–2' ಸಿನಿಮಾ ಯಶಸ್ವಿ 50 ದಿನಗಳ ಪ್ರದರ್ಶನವನ್ನು ಪೂರೈಸಿದೆ. ಈ ಸಂಭ್ರಮವನ್ನು ಆಚರಿಸಲು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಚಿತ್ರತಂಡದ ಸದಸ್ಯರು, ಪ್ರಮುಖ ಕಲಾವಿದರು, ತಾಂತ್ರಿಕ ವರ್ಗ ಹಾಗೂ ಚಿತ್ರರಂಗ ಮತ್ತು ಸಾಹಿತ್ಯ ಕ್ಷೇತ್ರದ ಗಣ್ಯರು ಭಾಗವಹಿಸಿ ಚಿತ್ರದ ಯಶಸ್ಸಿನ ಸಂತಸವನ್ನು ಹಂಚಿಕೊಂಡರು.
ಬೃಹತ್ ನಿರೀಕ್ಷೆಯೊಂದಿಗೆ ತೆರೆಕಂಡಿದ್ದ 'ಅಮೆರಿಕಾ ಅಮೆರಿಕಾ–2' ಚಿತ್ರವು ಪ್ರೀತಿ, ಕೌಟುಂಬಿಕ ಸಂಬಂಧಗಳು, ಮೌಲ್ಯಗಳು ಹಾಗೂ ಮಾನವೀಯ ಭಾವನೆಗಳ ಸುತ್ತ ಹೆಣೆದ ನೈಜ ಕಥೆಯ ಮೂಲಕ ಬಾಕ್ಸ್ ಆಫೀಸ್ನಲ್ಲಿ ಪ್ರೇಕ್ಷಕರ ಮನ ಗೆದ್ದಿದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ 50ನೇ ದಿನದ ಆಚರಣೆಯು ಕೇವಲ ಒಂದು ಮೈಲಿಗಲ್ಲಷ್ಟೇ ಅಲ್ಲದೆ, ಪ್ರೇಕ್ಷಕರು ತೋರಿದ ಅಪಾರ ಪ್ರೀತಿ ಹಾಗೂ ಕಲಾವಿದರ ಶ್ರಮಕ್ಕೆ ಸಾಕ್ಷಿಯಾಯಿತು.
ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು, ಚಿತ್ರದ ಕಲ್ಪನೆಯಿಂದ ಹಿಡಿದು ನಿರ್ಮಾಣ ಹಾಗೂ ತೆರೆಯ ಮೇಲೆ ತರುವವರೆಗೆ ಎದುರಾದ ಸವಾಲುಗಳು ಮತ್ತು ಅನುಭವಗಳನ್ನು ಹಂಚಿಕೊಂಡರು. "ನನಗೆ ಸಿನಿಮಾದ ಕಲೆಕ್ಷನ್ ಮತ್ತು ಗಳಿಕೆಯ ಲೆಕ್ಕಾಚಾರಗಳ ಬಗ್ಗೆ ಮಾತನಾಡುವುದು ಇಷ್ಟವಿಲ್ಲದ ಸಂಗತಿ. ಇಂದಿಗೂ ವಿದೇಶಗಳಿಂದ ಅನೇಕ ಪ್ರೇಕ್ಷಕರು ಕರೆ ಮಾಡಿ ಚಿತ್ರವನ್ನು ಮೆಚ್ಚಿ ಮಾತನಾಡುತ್ತಿದ್ದಾರೆ. ಗಿರೀಶ್ ಕಾಸರವಳ್ಳಿ ಅವರಂತಹ ಹಿರಿಯ ನಿರ್ದೇಶಕರು ಹಾಗೂ ಚಿತ್ರರಂಗದ ಪ್ರಮುಖರಿಂದ ಪ್ರಶಂಸೆ ವ್ಯಕ್ತವಾಗಿದೆ. ಸಹೃದಯಿ ಪ್ರೇಕ್ಷಕರಿಂದ ಸಿಗುತ್ತಿರುವ ಈ ಪ್ರೀತಿ ಮತ್ತು ಮೆಚ್ಚುಗೆಯ ಮಾತುಗಳು ನನಗೆ ಕೋಟ್ಯಂತರ ರೂಪಾಯಿಗಳ ಗಳಿಕೆಗಿಂತಲೂ ಅತ್ಯಂತ ಅಮೂಲ್ಯವಾದುದು" ಎಂದು ನಾಗತಿಹಳ್ಳಿ ತಿಳಿಸಿದರು.
ಚಿತ್ರದ ಅಂತ್ಯದ ಕುರಿತು ಪ್ರಸ್ತಾಪಿಸಿದ ಅವರು, ಪ್ರೇಕ್ಷಕರ ಭಾವನೆಗಳು ಮತ್ತು ಪಾತ್ರಗಳ ನೈಜತೆಗೆ ಕಟ್ಟುಬಿದ್ದು ಕಥೆಯನ್ನು ಅತ್ಯಂತ ಮನಮುಟ್ಟುವಂತೆ ರೂಪಿಸಿದ ಅನುಭವವನ್ನು ತಿಳಿಸಿದರು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನಟ ಪೃಥ್ವಿ ಅಂಬಾರ್ ಹಾಗೂ ನಟಿ ಶಾನ್ವಿ ಶ್ರೀವಾಸ್ತವ್ ತಮ್ಮ ನಟನಾ ಪಯಣ ಹಾಗೂ ಚಿತ್ರೀಕರಣದ ನೆನಪುಗಳನ್ನು ಮೆಲುಕು ಹಾಕಿದರು. ನಾಯಕಿ ಶಾನ್ವಿ ಶ್ರೀವಾಸ್ತವ್ ಅವರು ತಾಂತ್ರಿಕ ವರ್ಗದವರಿಗೆ ನೆನಪಿನ ಕಾಣಿಕೆ ವಿತರಿಸಿ ಗೌರವಿಸಿದರು. ಜೊತೆಗೆ, ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಹಿರಿಯ ನಟ ಮಂಡ್ಯ ರಮೇಶ್ ಅವರ ಅಭಿನಯಕ್ಕೂ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪ್ರಶಂಸೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಂ.ಎ. ಅನುಚೇತ್, ಲೇಖಕಿ ಕುಸುಮಾ ಆಯರಹಳ್ಳಿ, ದೀಪಾ ಹಿರೇಗುತ್ತಿ ಹಾಗೂ ಚಿತ್ರದ ಆಧಾರಿತ ಕಾದಂಬರಿ 'ಕ್ಷಮೆ'ಯ ಲೇಖಕಿ ಸಹನಾ ವಿಜಯಕುಮಾರ್ ಸೇರಿದಂತೆ ನಿರ್ದೇಶಕರಾದ ಪಿ. ಶೇಷಾದ್ರಿ, ಬಿ.ಎಸ್. ಲಿಂಗದೇವರು ಹಾಗೂ ಹಲವು ಗಣ್ಯರು ಭಾಗವಹಿಸಿ ಶುಭ ಕೋರಿದರು.