ಮುಂಬೈ : ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ವರ್ಲ್ಡ್ ಪ್ರೀಮಿಯರ್ ಶೋ ಲಾಸ್ ಏಂಜಲೀಸ್ನಲ್ಲಿ ವಿಜೃಂಭಣೆಯಿಂದ ನಡೆದಿದ್ದು, ವಿದೇಶಿ ವಿಮರ್ಶಕರಿಂದ ಮೊದಲ ಇಂಟರ್ನ್ಯಾಷನಲ್ ರಿವ್ಯೂಸ್ ಹೊರಬಿದ್ದಿವೆ. ಸಿನಿಮಾದ ಪ್ರೊಡಕ್ಷನ್ ಡಿಸೈನ್, ಕಾಸ್ಟ್ಯೂಮ್ಸ್ ಹಾಗೂ ಅದ್ಭುತ ದೃಶ್ಯವೈಭವವನ್ನು ಹಲವು ವಿಮರ್ಶಕರು ಮುಕ್ತಕಂಠದಿಂದ ಕೊಂಡಾಡಿದ್ದಾರೆ. 'ಎನ್ವೈಸಿ ಮೂವೀ ಗುರು'ವಿನ ಅವಿ ಆಫರ್ ಇದನ್ನು ಕಣ್ಮನ ಸೆಳೆಯುವ ಆಕ್ಷನ್ ಅಡ್ವೆಂಚರ್ ಎಂದಿದ್ದು, ಸೆಟ್ಸ್ ಮತ್ತು ಕಾಸ್ಟ್ಯೂಮ್ಗಳನ್ನು ಮೆಚ್ಚಿಕೊಂಡಿದ್ದಾರೆ. 'ಸ್ಕ್ರೀನ್ ರ್ಯಾಂಟ್'ನ ಬ್ರಾಂಡನ್ ಜಕಾರಿ ಚಿತ್ರಕ್ಕೆ 10ಕ್ಕೆ 7 ರೇಟಿಂಗ್ ನೀಡಿ ಅತ್ಯುತ್ತಮ ತಾಂತ್ರಿಕ ಸಾಧನೆ ಎಂದಿದ್ದರೆ, 'ಇಂಡಿವೈರ್' ಚಿತ್ರಕ್ಕೆ 'B' ಗ್ರೇಡ್ ನೀಡಿ ಮಹಾಕಾವ್ಯವನ್ನು ಬೃಹತ್ ಮಟ್ಟದಲ್ಲಿ ತೆರೆಗೆ ತಂದ ಪ್ರಯತ್ನವನ್ನು ಶ್ಲಾಘಿಸಿದೆ.
ಮೇಕಿಂಗ್ ಹಾಗೂ ದೃಶ್ಯವೈಭವಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಸಿನಿಮಾದ ಉದ್ದ ಮತ್ತು ನಿರೂಪಣೆಯ ಬಗ್ಗೆಯೂ ಟೀಕೆಗಳು ಕೇಳಿಬಂದಿವೆ. ಭಾರತದಲ್ಲಿ ರಿಲೀಸ್ ಆಗುವ ವರ್ಷನ್ಗಿಂತ ಇಂಗ್ಲಿಷ್ ವರ್ಷನ್ ಸುಮಾರು 30 ನಿಮಿಷ ಚಿಕ್ಕದಾಗಿದ್ದರೂ, 150 ನಿಮಿಷಗಳ ಈ ಚಿತ್ರ ಪ್ರೇಕ್ಷಕರಿಗೆ ಸುಸ್ತು ಮಾಡುತ್ತದೆ ಹಾಗೂ ಎಮೋಷನಲ್ ಆಗಿ ಸಂಪೂರ್ಣವಾಗಿ ಕನೆಕ್ಟ್ ಆಗುವುದಿಲ್ಲ ಎಂದು ಕೆಲವು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. 'ನೆಕ್ಸ್ಟ್ ಬೆಸ್ಟ್ ಪಿಕ್ಚರ್'ನ ಜಿಯೋವಾನಿ ಲಾಗೊ ಚಿತ್ರಕ್ಕೆ 5/10 ರೇಟಿಂಗ್ ನೀಡಿದ್ದು, ಇದನ್ನು ಸಿನಿಮಾಗಿಂತ ಟಿವಿ ಸೀರೀಸ್ ಮಾಡಿದ್ದರೆ ಪಾತ್ರಗಳನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡಬಹುದಿತ್ತು ಎಂದು ಸಲಹೆ ನೀಡಿದ್ದಾರೆ.
ಇನ್ನು 'ಐಜಿಎನ್'ನ ಸಿದ್ಧಾರ್ಥ್ ಅದ್ಲಾಖಾ 4/10 ರೇಟಿಂಗ್ ನೀಡಿ, ಆಕ್ಷನ್ ಸೀನ್ಗಳು, ಸಿಜಿಐ (CGI) ಹಾಗೂ ಲಿಪ್-ಸಿಂಕ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವೆಂಬರ್ 5ರಂದು ವಿಶ್ವಾದ್ಯಂತ ಐಮ್ಯಾಕ್ಸ್ ಹಾಗೂ ಇತರ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ರವಿ ದುಬೆ ಮತ್ತು ಸನ್ನಿ ಡಿಯೋಲ್ ಮುಖ್ಯಭೂಮಿಕೆಯಲ್ಲಿದ್ದು, ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್ಇಜಿ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. ಭಾರತೀಯ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಈ ಬೃಹತ್ ಕ್ಯಾನ್ವಾಸ್ನ ಚಿತ್ರಕ್ಕೆ ಎಂಥಾ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.