ಮಂಗಳೂರು: ನಿತಿನ್ ರೈ ಕುಕ್ಕುವಳ್ಳಿಯ ಅದ್ಭುತ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ತುಳು ಚಲನಚಿತ್ರ 'ಬನ' ಜಿಲ್ಲೆಯಾದ್ಯಂತ ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿಪ್ರಿಯರಿಂದ ಅತ್ಯಂತ ಮುಕ್ತಕಂಠದ ಪ್ರಶಂಸೆ ಹಾಗೂ ವ್ಯಾಪಕ ಮೆಚ್ಚುಗೆಯನ್ನು ಗಳಿಸಿಕೊಳ್ಳುತ್ತಿದೆ. ಕರಾವಳಿಯ ಪವಿತ್ರ ಹಾಗೂ ಆಳವಾದ ಧಾರ್ಮಿಕ ಪರಂಪರೆಯಾದ ನಾಗಾರಾಧನೆ ಮತ್ತು ನಾಗಬನದ ಹಿನ್ನೆಲೆಯಲ್ಲಿ ಈ ಚಿತ್ರದ ಇಡೀ ಕಥಾಹಂದರವನ್ನು ಹೆಣೆಯಲಾಗಿದೆ. ಕರಾವಳಿ ತೀರದ ಮಣ್ಣಿನ ಸೊಗಡು, ಸಾಂಪ್ರದಾಯಿಕ ನಂಬಿಕೆಗಳು, ಕುಟುಂಬದ ಆಂತರಿಕ ಭಾಂದವ್ಯಗಳು ಮತ್ತು ಕುತೂಹಲ ಕೆರಳಿಸುವ ಮಿಸ್ಟರಿ ಘಟನೆಗಳನ್ನು ಅತ್ಯಂತ ನೈಜವಾಗಿ ಈ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. "ಬನ" ಹೆಸರು ಕೇಳಿದಾಗ ಇದು ಕಲಾತ್ಮಕ (art) ಸಿನಿಮಾ ಆಗಿರಬಹುದೇನೋ ಅನ್ನಿಸಿದರೂ, ಈ ಸಿನಿಮಾ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿ ಮೂಡಿ ಬಂದಿದೆ.
ಬೇಟೆಗೆ ಹೋದಾಗ ಕಾಡಿನಲ್ಲಿ ಸಿಗುವ ಮಗು ಮತ್ತು ಆ ಮಗುವಿಗೆ ನಾಗನೊಂದಿಗೆ ಇರುವ ಸಂಬಂಧ, ಇಲ್ಲಿಂದ ಶುರುವಾಗುವ ಕಥೆ ಆ ಮಗು ಸೇರುವ ಮನೆ ಆ ಮನೆಯಲ್ಲಿ ನಡೆದಂತಹ ಘಟನೆಗಳು, ಆ ಮನೆಯ ಸದಸ್ಯರುಗಳ ಸಂಬಂಧ, ಮನೆಯ ವಾತಾವರಣ, ಊರಿನ ಶ್ರೀಮಂತನೊಬ್ಬ ಮೆರೆಯುತ್ತಿರುವ ಹಾಗೆ ಕಂಡರೂ ಕೊನೆಗೆ ಆ ಮಗು ಸೇರಿದ ಮನೆಗೂ ಅವನಿಗೂ ಇರುವ ಒಂದು ಸಣ್ಣ ಎಳೆಯ ಕೊಂಡಿ ಹೀಗೆ ಸಾಗುವ ಸಿನಿಮಾದ ಕ್ಲೈಮ್ಯಾಕ್ಸ್ ನ ಊಹಿಸಿರದ ತಿರುವುಗಳನ್ನು ನಿರ್ದೇಶಕರು ಸಾಂಗವಾಗಿ ಕಥೆ ಸಾಗುವಂತೆ ತೋರಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರು ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ನಟರಾಗಿ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ಪ್ರಬುದ್ಧ ಅಭಿನಯ ನೀಡುವ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅವರೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ರೂಪಶ್ರೀ ವರ್ಕಾಡಿ, ಭವ್ಯಾ ಪೂಜಾರಿ ಮತ್ತು ಶರತ್ ಆಳ್ವ ಪ್ರಮುಖ ಪಾತ್ರಗಳಲ್ಲಿ ಜೀವಿಸಿದ್ದು, ಪ್ರತಿಯೊಬ್ಬ ಕಲಾವಿದರ ನಟನೆಯೂ ಸಿನಿಮಾಗೆ ಜೀವ ತುಂಬಿದೆ.
ಯಾವುದೇ ಅನಗತ್ಯ ಕಮರ್ಷಿಯಲ್ ಅಂಶಗಳು ಅಥವಾ ಕೃತಕ ದೃಶ್ಯಗಳಿಲ್ಲದೆ ಅತ್ಯಂತ ಸರಳ ಹಾಗೂ ಕಥೆಗೆ ಪೂರಕವಾದ ನಿರೂಪಣೆ ಇಲ್ಲಿದೆ. ಬಿಗಿಯಾದ ಚಿತ್ರಕಥೆ, ಸಸ್ಪೆನ್ಸ್ ಅಂಶಗಳು ಮತ್ತು ಪ್ರೇಕ್ಷಕರನ್ನು ಕಡೆಗಳಿಗೆಯವರೆಗೂ ಹಿಡಿದಿಟ್ಟುಕೊಳ್ಳುವ ಸಶಕ್ತ ಕ್ಲೈಮ್ಯಾಕ್ಸ್ ದೃಶ್ಯಗಳು ಚಿತ್ರದ ನಿಜವಾದ ಜೀವಾಳವಾಗಿವೆ. ತಾಂತ್ರಿಕ ವಿಭಾಗದಲ್ಲೂ 'ಬನ' ಸಿನಿಮಾ ಅತ್ಯುನ್ನತ ಮಟ್ಟದಲ್ಲಿದೆ. ಅರುಣ್ ರೈ ಪುತ್ತೂರು ರ ಛಾಯಾಗ್ರಹಣವು ಚೆನ್ನಾಗಿದೆ. ನವೀನ್ ಅವರ ಅಚ್ಚುಕಟ್ಟಾದ ಸಂಕಲನ ಹಾಗೂ ಭಾವನಾತ್ಮಕ ಸನ್ನಿವೇಶಗಳಿಗೆ ಸಾಥ್ ನೀಡುವ ಹಿನ್ನೆಲೆ ಸಂಗೀತವು ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಒಟ್ಟಾರೆಯಾಗಿ, ಕಂಟೆಂಟ್ ಆಧಾರಿತ ವಿಶಿಷ್ಟ ಹಾಗೂ ಅರ್ಥಪೂರ್ಣ ಪ್ರಯತ್ನವಾಗಿ ಮೂಡಿಬಂದಿರುವ 'ಬನ' ಸಿನಿಮಾ, ಪ್ರೇಕ್ಷಕರ ಹೃದಯ ಗೆಲ್ಲುವ ಜೊತೆಗೆ ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಮತ್ತು ಭರವಸೆಯನ್ನು ಮೂಡಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.
ನಿರ್ದೇಶಕರ ಹಿಂದಿನ ಎರಡು ಚಿತ್ರಗಳ ಅನುಭವ "ಬನ" ಚಿತ್ರದ ಚಿತ್ರಕಥೆಯಲ್ಲಿ ಸೊಗಸಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಕಿರಿ ಕಿರಿ ಅನ್ನಿಸದ ಸನ್ನಿವೇಶಗಳು, ಕಥೆಗಾಗಿ ಆರಿಸಿದ ಮನೆ, ಊರು ಹಾಗೆ ಸುತ್ತಮುತ್ತಲಿನ ಪ್ರದೇಶಗಳು ಪ್ರೇಕ್ಷಕರನ್ನು ನೈಜತೆ ಕಡೆಗೆ ಕೊಂಡೊಯುತ್ತದೆ. ಅತಿಯಾದ ಆಡಂಬರವಿಲ್ಲ, ಕಚಗುಳಿ ಇಡುವಂತ ತಿಳಿ ಹಾಸ್ಯ ನೋಡುಗರಿಗೆ ಮುದ ನೀಡುತ್ತದೆ. ಸಂಭಾಷಣೆಯಲ್ಲಿ ಒಂದೆರೆಡು ಕಡೆ ತಪ್ಪಿದ್ದರೂ ಅದು ಅಷ್ಟಾಗಿ ಗೊತ್ತಾಗುವುದಿಲ್ಲ.
ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾವು ಬುಕ್ಮೈಶೋನಂತಹ ಪ್ರಮುಖ ವೇದಿಕೆಗಳಲ್ಲಿ 9.5 ರಷ್ಟು ಅತಿ ಹೆಚ್ಚಿನ ರೇಟಿಂಗ್ ಪಡೆದುಕೊಂಡಿದೆ.
ಒಟ್ಟಿನಲ್ಲಿ ನಾಗನನ್ನು ನಂಬುವ ತುಳುವರು ಕುಟುಂಬ ಸಮೇತ ಒಮ್ಮೆಯಾದರೂ ನೋಡಲೇ ಬೇಕು ಎಂಬುದು ಕರಾವಳಿ ತರಂಗಿಣಿಯ ಆಶಯ.
✍️ಪ್ರೀತಮ್ ರೈ ಇಳಂತಾಜೆ