‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್ ಹಾಗೂ ‘ಪ್ರೇಮದ ಊರಲಿ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಛ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ಬಹುನಿರೀಕ್ಷಿತ ‘MR ಜಾಕ್’ ಚಿತ್ರದ ಎರಡನೇ ಹಾಡು ‘ಆರಂಭ ವಸಂತ ಆರಂಭ’ ಇತ್ತೀಚೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಹಾಗೂ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿರುವ ಶೀರ್ಷಿಕೆ ಗೀತೆಯ ಯಶಸ್ಸಿನ ಬೆನ್ನಲ್ಲೇ ಬಿಡುಗಡೆಯಾಗಿರುವ ಈ ಮದುವೆಯ ಸಂಭ್ರಮದ ಮೆಲೋಡಿ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಮೋದ್ ಮರವಂತೆ ಅವರ ಸಾಹಿತ್ಯ, ಕಿರಣ್ ರವೀಂದ್ರನಾಥ್ ಅವರ ಸಂಗೀತ ಸಂಯೋಜನೆ ಹಾಗೂ ಜಸ್ಕರಣ್ ಸಿಂಗ್ ಅವರ ಗಾಯನದಲ್ಲಿ ಈ ಹಾಡು ಮೂಡಿಬಂದಿದೆ.
ಹಾಡಿನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಪ್ರಮೋದ್ ಮರವಂತೆ, ಹಲವು ವರ್ಷಗಳ ಹಿಂದೆಯೇ ಈ ಹಾಡನ್ನು ಬರೆದಿದ್ದೆ. ಚಿಕ್ಕಂದಿನಿಂದಲೂ ಕಿರಣ್ ರವೀಂದ್ರನಾಥ್ ಅವರ ಸಂಗೀತವನ್ನು ಕೇಳುತ್ತಾ ಬೆಳೆದ ನನಗೆ, ಅವರೊಂದಿಗೆ ಕೆಲಸ ಮಾಡುವ ಅವಕಾಶ 'MR ಜಾಕ್' ಮೂಲಕ ಸಿಕ್ಕಿರುವುದು ಅತ್ಯಂತ ಸಂತೋಷ ತಂದಿದೆ ಎಂದರು. ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮಾತನಾಡಿ, ಪ್ರತಿಯೊಂದು ಚಿತ್ರದಲ್ಲೂ ಉತ್ತಮ ಮೆಲೋಡಿ ಹಾಡು ಇರಬೇಕು ಎಂಬುದು ನನ್ನ ಆಶಯ. ಈ ಹಾಡು ಜೆನ್ ಝಿ ಸೇರಿದಂತೆ ಎಲ್ಲ ತಲೆಮಾರಿನ ಪ್ರೇಕ್ಷಕರ ಮನ ತಣಿಸಲಿದೆ ಎಂಬ ವಿಶ್ವಾಸವಿದೆ ಎಂದು ಹಂಚಿಕೊಂಡರು.
ಚಿತ್ರದ ನಿರ್ದೇಶಕ ಸುಮಂತ್ ಅವರು ತಾಂತ್ರಿಕ ತಂಡದ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕಥೆ ಕೇಳಿದ ತಕ್ಷಣವೇ ಅಭಿನಯಿಸಲು ಒಪ್ಪಿಕೊಂಡ ಗುರುನಂದನ್ ಹಾಗೂ ಛಾಯಾಗ್ರಾಹಕ ಶಿವಸೇನ, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಸೇರಿದಂತೆ ಇಡೀ ತಂಡದ ಶ್ರಮದಿಂದ ನನ್ನ ಕಲ್ಪನೆ ಬೆಳ್ಳಿಪರದೆ ಮೇಲೆ ಸುಂದರವಾಗಿ ಮೂಡಿಬಂದಿದೆ ಎಂದರು.
ನಾಯಕ ನಟ ಗುರುನಂದನ್ ಮಾತನಾಡಿ, ನಮ್ಮ ಮೊದಲ ಹಾಡಿಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯ ನಂತರ, ಇದೀಗ ಮದುವೆಯ ಸಂಭ್ರಮ ಸಾರುವ ಈ ರೋಮ್ಯಾಂಟಿಕ್ ಮೆಲೋಡಿ ಹಾಡು ಹೊರಬಂದಿದೆ. ಮೂಡಿಗೆರೆ ಸಮೀಪದ ಕಳಸ ಬಳಿಯ ಮೈದಾಡಿ ಗುಡ್ಡದಲ್ಲಿ ಹವಾಮಾನದ ಸವಾಲುಗಳ ನಡುವೆಯೂ ಮೂರು ದಿನಗಳ ಕಾಲ ಅತ್ಯಂತ ಸುಂದರವಾಗಿ ಚಿತ್ರೀಕರಣ ನಡೆಸಿದ್ದೇವೆ. ನಮ್ಮ ಚಿತ್ರವು ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಟ್ರೇಲರ್ ಹಾಗೂ ಇತರ ಹಾಡುಗಳನ್ನು ಪ್ರೇಕ್ಷಕರ ಮುಂದಿಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಛ ಮಾತನಾಡಿ, ಟೀಸರ್ ಹಾಗೂ ಮೊದಲ ಶೀರ್ಷಿಕೆ ಗೀತೆಗೆ ಸಿಕ್ಕ ಬೆಂಬಲದಿಂದ ಉತ್ಸಾಹ ಹೆಚ್ಚಾಗಿದೆ. ಈ ಚಿತ್ರದಲ್ಲಿ ನಾನು 'ನಂದಿನಿ' ಎಂಬ ಸಂಪ್ರದಾಯಬದ್ಧ ಕುಟುಂಬದ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಪಾತ್ರದ ಕುರಿತು ಬೆಳಕು ಚೆಲ್ಲಿದರು.
ಸುಮಂತ್ ನಿರ್ದೇಶನದ ಈ ಚಿತ್ರಕ್ಕೆ ಶಿವಸೇನ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಒದಗಿಸಿದ್ದು, ಚಿತ್ರದಲ್ಲಿ ಧರ್ಮಣ್ಣ, ಸುಶ್ಮಿತ ಜಗ್ಗಪ್ಪ, ಮಿತ್ರಾ, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಅರವಿಂದ್ ರಾವ್ ಸೇರಿದಂತೆ ಪ್ರಮುಖ ಕಲಾವಿದರ ತಾರಾಗಣವಿದೆ.