image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೊಂಡ 'ಬನ' ತುಳು ಚಿತ್ರ

ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೊಂಡ 'ಬನ' ತುಳು ಚಿತ್ರ

ಮಂಗಳೂರು: ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ "ಬನ" ತುಳುಚಲನ ಚಿತ್ರ ಅಕ್ಟೋಬರ್ 23 ರಂದು ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ , “ಬನ ಸಿನಿಮಾ ತುಳುನಾಡಿಗೆ ಕೀರ್ತಿ ತರುವ ಕೆಲಸ ಮಾಡಲಿ. ನಟನೆ ಮಾಡಿದ ಎಲ್ಲರಿಗೂ ಯಶಸ್ಸು ಸಿಗಲಿ. ಈ ಸಿನಿಮಾ ಎಲ್ಲ ತುಳುವರು ಕುಟುಂಬ ಸಮೇತರಾಗಿ ನೋಡಬೇಕು” ಎಂದರು.

ಬಳಿಕ ಮಾತಾಡಿದ ತುಳು ಚಲನಚಿತ್ರ  ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ “ತುಳುನಾಡಿಗೆ ತುಂಬಾ ಕನೆಕ್ಟ್ ಆಗಿರುವಂತ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ” ಎಂದರು. 

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತಾಡಿ, “ತುಳುನಾಡಿನ ಕಥೆಯನ್ನು ಆಧರಿಸಿದ ಸಿನಿಮಾ ಬನ ಈಗಾಗಲೇ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ತುಳುನಾಡಿನ ಎಲ್ಲರೂ ಸಿನಿಮಾ ಥಿಯೇಟರ್ ಗೆ ಬಂದು ಸಿನಿಮಾ ನೋಡಿ” ಎಂದರು. 
ರಾಜ್ಯ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತಾಡಿ, “ನಾಗಬನಕ್ಕೂ ತುಳುನಾಡಿಗೂ ಅವಿನಾಭಾವ ಸಂಬಂಧವಿದೆ. ನಾಗಾರಾಧನೆಯ ಮಹತ್ವವನ್ನು ತಿಳಿಸುವ ಸಿನಿಮಾ ಕಮರ್ಷಿಯಲ್ ಇದಾಗಿದ್ದು ತುಳುವರು ಸಿನಿಮಾ ನೋಡುವ ಮೂಲಕ ನಿರ್ಮಾಪಕರನ್ನು ಗೆಲ್ಲಿಸಬೇಕು” ಎಂದರು.

ನಟ ಸಾಯಿಕೃಷ್ಣ ಕುಡ್ಲ ಮಾತಾಡಿ, “ನಿತಿನ್ ರೈ ಅವರು ಮೂರನೇ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರ ಪ್ರತಿಭೆಗೆ ಇಡೀ ತುಳುನಾಡು ಸಿನಿಮಾ ನೋಡುವ ಮೂಲಕ ಗೌರವ ಕೊಡಬೇಕಿದೆ” ಎಂದರು. ಯಥಾಥ್೯ ಸೋಶಿಯಲ್ ಮಂಗಳೂರು ಇದರ ಅಧ್ಯಕ್ಷರಾದ ಈಶ್ವರ್ ಪ್ರಸಾದ್ ಶೆಟ್ಟಿ ಚಿತ್ರ ತಂಡಕ್ಕೆ  ಶುಭ ಹಾರೈಸಿದರು.

"ಬನ" ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ,  ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲ್ಲಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಅಭುನಯಿಸಿದ್ದಾರೆ.

ನಾಯಕನಾಗಿ ನಿಹಾಲ್ ರೈ,  ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ಸಿನಿಮಾರಂಗಕ್ಕೆ  ಪಾದಾರ್ಪಣೆ ಮಾಡಿದ್ದಾರೆ, ಶರತ್ ಆಳ್ವ, ಪ್ರೀಯ ಶೆಟ್ಟಿ, ವಿಜಯಹರಿ ರೈ, ಭವ್ಯಶ್ರಿ ಪೂಜಾರಿ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್ , ಧನ್ಯ ಪೂಜಾರಿ, ಪ್ರವೀಣ್ ಕೊಡಕ್ಕಲ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.  ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದು ನವೀನ್ ನೇರಳ್ತೊಡಿ ಅವರ  ಸಂಕಲನ ಚಿತ್ರಕ್ಕಿದೆ.   ಜಯಕಾರ್ತಿ ಅವರು ಸಂಗೀತ ನೀಡಿದ್ದಾರೆ.

ಉತ್ತಮ ಕಥೆಚಿತ್ರಕಥೆಯನ್ನು ಒಳಗೊಂಡ ಬನ  ಸಿನಿಮಾದಲ್ಲಿ ಸಮಾಜಕ್ಕೆ ಉತ್ತಮ ಸಂದೇಶದ ಜೊತೆಗೆ ಹಾಸ್ಯ, ಪ್ರೀತಿ, ಸಿಡುಕು, ಸೆಂಟಿಮೆಂಟ್  ಎಲ್ಲವೂ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದೇವೆ ಎಂದು  ಸಿನಿಮಾದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ತಿಳಿಸಿದರು. 

ವೇದಿಕೆಯಲ್ಲಿ  ನಿರ್ಮಾಪಕ  ಮನೋಹರ ರೈ ವೈಪಾಲ, ಇಸ್ಮಾಯಿಲ್ ಮೂಡುಶೆಡ್ಡೆ, ವಿನೀತ್ ಕುಮಾರ್, ಸಮತಾ ಅಮೀನ್, ಪುರುಷೋತ್ತಮ್ ಶೆಟ್ಟಿ,  ಜಯಪ್ರಕಾಶ್ ಶೆಟ್ಟಿ ಉಪ್ಪಳ, ಬಾಳ ಜಗನ್ನಾಥ ಶೆಟ್ಟಿ, ಕುದ್ರೋಳಿ ಗಣೇಶ್,  ನವೀನ್ ಶೆಟ್ಟಿ ಅಳಕೆ, ರಮೇಶ್ ರೈ ಕುಕ್ಕುವಳ್ಳಿ, ಸುಬ್ರಹ್ಮಣ್ಯ ಭಟ್, ರೂಪ ವರ್ಕಾಡಿ, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ