image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಳೆ ಕರಾವಳಿಯಾದ್ಯಂತ 'ಬನ' ತುಳು ಸಿನಿಮಾ ಬಿಡುಗಡೆ: ಕೌತುಕ ಮೂಡಿಸಿದ ನಾಗರಾಧನೆಯ ಸಸ್ಪೆನ್ಸ್ ಥ್ರಿಲ್ಲರ್

ನಾಳೆ ಕರಾವಳಿಯಾದ್ಯಂತ 'ಬನ' ತುಳು ಸಿನಿಮಾ ಬಿಡುಗಡೆ: ಕೌತುಕ ಮೂಡಿಸಿದ ನಾಗರಾಧನೆಯ ಸಸ್ಪೆನ್ಸ್ ಥ್ರಿಲ್ಲರ್

ಮಂಗಳೂರು: ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣ ಹಾಗೂ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಅವರ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ಬಹುನಿರೀಕ್ಷಿತ "ಬನ" ತುಳು ಚಲನಚಿತ್ರವು ಅಕ್ಟೋಬರ್ 23 ರಂದು ಕರಾವಳಿ ಜಿಲ್ಲೆಯಾದ್ಯಂತ ಪ್ರದರ್ಶನಕ್ಕೆ ಸಜ್ಜಾಗಿದೆ.

ಈ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಸೇರಿದಂತೆ ಹಲವು ಕೇಂದ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ತೆರೆಕಾಣಲಿದೆ. ಈಗಾಗಲೇ ಮುಂಬೈ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ಶೋಗಳಲ್ಲಿ ಸಿನಿಮಾವನ್ನು ವೀಕ್ಷಿಸಿರುವ ಪ್ರೇಕ್ಷಕರು ಅತ್ಯುತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಬೆಳ್ಳಿಪರದೆಗೆ ಪ್ರವೇಶ

ಮಾಧ್ಯಮ ರಂಗದ ಖ್ಯಾತ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರು ಈ ಚಿತ್ರದ ಮೂಲಕ ನಟನೆಯತ್ತ ಪಾದಾರ್ಪಣೆ ಮಾಡಿದ್ದು, ಅವರ ಖಡಕ್ ಸಂಭಾಷಣೆ ಹಾಗೂ ಅಭಿನಯ ಸಿನಿಮಾದ ಪ್ರಮುಖ ಹೈಲೈಟ್ ಆಗಿದೆ. ಇವರೊಂದಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪಾ ವರ್ಕಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕನಾಗಿ ನಿಹಾಲ್ ರೈ ಹಾಗೂ ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ಚಿತ್ರರಂಗಕ್ಕೆ ಧುಮುಕಿದ್ದಾರೆ. ಉಳಿದಂತೆ ಶರತ್ ಆಳ್ವ, ಪ್ರಿಯಾ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್, ಧನ್ಯ ಪೂಜಾರಿ, ಪ್ರವೀಣ್ ಕೊಡಕ್ಕಲ್ ಮುಂತಾದ ತಾರಾಗಣ ನಟಿಸಿದೆ. ಚಿತ್ರಕ್ಕೆ ಅರುಣ್ ರೈ ಪುತ್ತೂರು ಅವರ ಛಾಯಾಗ್ರಹಣ, ನವೀನ್ ನೇರಳ್ತೊಡಿ ಅವರ ಸಂಕಲನ ಮತ್ತು ಜಯಕಾರ್ತಿ ಅವರ ಸಂಗೀತ ನೀಡಿದ್ದಾರೆ.

ಆಕ್ಷನ್, ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾಹಂದರ

"ಬನ" ಸಿನಿಮಾದ ಟ್ರೇಲರ್ ಬಿಡುಗಡೆಯಾದಾಗಿನಿಂದಲೇ ಪ್ರೇಕ್ಷಕರಲ್ಲಿ ಭಾರಿ ಕೌತುಕ ಹಾಗೂ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕಾಡಿನಲ್ಲಿ ಪ್ರತ್ಯಕ್ಷವಾಗುವ ಮಗು, ಮನೆ ಮುಂದೆ ಕಾಣಿಸಿಕೊಳ್ಳುವ ಹಾವು ಹಾಗೂ ನಾಗಬನಕ್ಕೆ ಹಾನಿ ಮಾಡಿದವರನ್ನು ಕಾಯುವ ನಾಗರಾಜನ ನಿಗೂಢತೆ ಹೀಗೆ ಹಲವು ಪ್ರಶ್ನೆಗಳ ಸುತ್ತ ಕಥೆ ಹೆಣೆಯಲಾಗಿದೆ. ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ರೋಮ್ಯಾನ್ಸ್ ಅಂಶಗಳನ್ನೊಳಗೊಂಡ ಈ ಚಿತ್ರವು ‘ನಮ್ಮ ಮಣ್ಣ್‌ದ ಕಥೆ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ತುಳುನಾಡಿನ ವೈಭವದ ಸಂಸ್ಕೃತಿ ಮತ್ತು ನಂಬಿಕೆಯನ್ನು ಪ್ರೇಕ್ಷಕರ ಮುಂದಿಡಲಿದೆ.

ಪ್ರಕೃತಿ ಮತ್ತು ನಂಬಿಕೆಯ ನಾಗಬನದ ಹಿನ್ನೆಲೆ

ಈ ಹಿಂದೆ ‘ಧರ್ಮಚಾವಡಿ’ ಮತ್ತು ‘ಧರ್ಮದೈವ’ ಎಂಬ ಯಶಸ್ವಿ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಅವರು ಸುಮಾರು ಒಂದು ವರ್ಷದ ದೀರ್ಘ ಸಿದ್ಧತೆಯೊಂದಿಗೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ನಾಗಬನದ ಮಹತ್ವ, ಭಯಭಕ್ತಿ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶದ ಜೊತೆಗೆ ಹಾಸ್ಯ, ಪ್ರೀತಿ ಮತ್ತು ಸೆಂಟಿಮೆಂಟ್ ಮಿಶ್ರಣ ಮಾಡಿ ಸಿನಿಮಾವನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ. 'ಬನ' ಸಿನಿಮಾವು ಕರಾವಳಿಯ ಹಿಟ್ ಚಿತ್ರಗಳ ಸಾಲಿಗೆ ಸೇರಲಿದೆ ಎಂಬ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.

Category
ಕರಾವಳಿ ತರಂಗಿಣಿ