ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಭೈರತಿ ರಣಗಲ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಟೀಸರ್ ಕುತೂಹಲ ಮೂಡಿಸಿದ್ದು, ಶಿವಣ್ಣ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ಟೈಟಲ್ ಸಾಂಗ್ ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ "ಭೈರತಿ ರಣಗಲ್" ಚಿತ್ರ ನವೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಟ್ರೇಲರ್ ಬರಲಿದೆ.
ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್ ನಲ್ಲಿ ಬಂದಿದ್ದ "ಮಫ್ತಿ" ಚಿತ್ರದ ಪ್ರೀಕ್ವೆಲ್ ಆಗಿರುವ "ಭೈರತಿ ರಣಗಲ್" ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ "ಭೈರತಿ ರಣಗಲ್" ಚಿತ್ರಕ್ಕಿದೆ.