image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಶಾಂತ್ ನೀಲ್ ಪ್ರಸ್ತುತಿಯ 418 ಹಾರರ್-ಥ್ರಿಲ್ಲರ್ ಸಿನಿಮಾದ ಕನ್ನಡ ಹಾಗೂ ಹಿಂದಿ ಆವೃತ್ತಿಯ ಟ್ರೇಲರ್ ಬಿಡುಗಡೆ: ಅಕ್ಟೋಬರ್ 23 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ

ಪ್ರಶಾಂತ್ ನೀಲ್ ಪ್ರಸ್ತುತಿಯ 418 ಹಾರರ್-ಥ್ರಿಲ್ಲರ್ ಸಿನಿಮಾದ ಕನ್ನಡ ಹಾಗೂ ಹಿಂದಿ ಆವೃತ್ತಿಯ ಟ್ರೇಲರ್ ಬಿಡುಗಡೆ: ಅಕ್ಟೋಬರ್ 23 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ

ಬೆಂಗಳೂರು: ದೇಶಾದ್ಯಂತ ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಭಾರಿ ಜನಮನ್ನಣೆಗಳಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಲಾಂಛನದಲ್ಲಿ ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಬಂಡವಾಳ ಹೂಡಿರುವ, ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಿಸುತ್ತಿರುವ ನೂತನ ಹಾರರ್-ಥ್ರಿಲ್ಲರ್ ಸಿನಿಮಾ ‘418’ ನ ಕನ್ನಡ ಹಾಗೂ ಹಿಂದಿ ಆವೃತ್ತಿಯ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ನವ ನಿರ್ದೇಶಕ ಕೀರ್ತನ್ ನಾಡಗೌಡ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಕನ್ನಡತಿ ಚೈತ್ರಾ ಆಚಾರ್, ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಮತ್ತು ಶಶಾಂಕ್ ಪಾಟೀಲ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

"ಆ ಮನೆಯೊಳಗೆ ಒಂದು ಹಕ್ಕಿಯೂ ಕಾಲಿಟ್ಟಿಲ್ಲ" ಎಂಬ ವಾಚ್‌ಮನ್‌ನ ಬೆಚ್ಚಿಬೀಳಿಸುವ ಸಂಭಾಷಣೆಯೊಂದಿಗೆ ಆರಂಭವಾಗುವ ಟ್ರೇಲರ್, ಆರಂಭಿಕ ಹಂತದಲ್ಲೇ ಯಾವುದೋ ಅದೃಶ್ಯ ಶಕ್ತಿಯ ಭೀಕರ ಉಪಸ್ಥಿತಿಯ ದಟ್ಟ ಸುಳಿವು ನೀಡುತ್ತದೆ. ವಾಸ್ತವ ಮತ್ತು ಭ್ರಮೆಗಳೆರಡರ ನಡುವೆ ಸಿಲುಕಿ ಒದ್ದಾಡುವ 18 ವರ್ಷದ ವಿವೇಕ್ ಎಂಬ ಯುವಕನ ಸುತ್ತ ಚಿತ್ರದ ಕಥೆಯ ಎಳೆ ತೆರೆದುಕೊಳ್ಳುತ್ತದೆ. ಸ್ಥಳೀಯರ ಪ್ರಬಲ ವಿರೋಧದ ನಡುವೆಯೂ ಬರೋಬ್ಬರಿ 15 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ VIMS ಕಟ್ಟಡವನ್ನು ಮರುಪ್ರವೇಶಿಸಿದಾಗ ಕಥೆಯ ನಿಗೂಢತೆ ಮತ್ತಷ್ಟು ಗಾಢವಾಗುತ್ತದೆ. ಅಲ್ಲಿನ ರಹಸ್ಯಮಯ 'ರೂಮ್ ನಂ. 418' ಅಡಗಿಸಿಕೊಂಡಿರುವ ಭಯಾನಕ ರಹಸ್ಯವೇನು ಎಂಬ ತೀವ್ರ ಕುತೂಹಲದ ನಡುವೆ, ದೇವಿಕಾ ಪಾತ್ರದ ಭೀಕರ ಎಂಟ್ರಿಯು ವೀಕ್ಷಕರಲ್ಲಿ ಅಕ್ಷರಶಃ ನೈಜ ನಡುಕ ಹುಟ್ಟಿಸುವಂತಿದೆ.

ಟ್ರೇಲರ್‌ನ ಮೊದಲಾರ್ಧವು ವಾಸ್ತವ ಮತ್ತು ಕಲ್ಪನೆಗಳ ನಡುವಿನ ಸೈಕಲಾಜಿಕಲ್ ಥ್ರಿಲ್ಲರ್‌ನಂತೆ ಭಾಸವಾದರೆ, ದ್ವಿತೀಯಾರ್ಧದಲ್ಲಿ ಸೂಪರ್‌ನ್ಯಾಚುರಲ್ ಹಾಗೂ ಹಾರರ್ ಅಂಶಗಳ ಭಯಾನಕ ಸಮ್ಮಿಶ್ರಣದೊಂದಿಗೆ ಕಥೆ ರೋಚಕ ತಿರುವು ಪಡೆದುಕೊಳ್ಳುತ್ತದೆ. ಯಾವುದೇ ಅನಗತ್ಯ ಹಾಸ್ಯ ಅಥವಾ ವಾಣಿಜ್ಯ ಅಂಶಗಳಿಗೆ ಎಡೆಯಿಲ್ಲದೆ, ನಿರ್ದೇಶಕ ಕೀರ್ತನ್ ನಾಡಗೌಡ ಅವರು ಪ್ರತಿಯೊಂದು ಫ್ರೇಮ್‌ನಲ್ಲೂ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತೆ ಕಥೆಯನ್ನು ಬಹಳ ಗಂಭೀರವಾಗಿ ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಖ್ಯಾತ ನಟಿ ಚೈತ್ರಾ ಆಚಾರ್ ಅವರ ಆತಂಕಕಾರಿ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಅದ್ಭುತ ನಟನೆ ಟ್ರೇಲರ್‌ನ ಪ್ರಮುಖ ಹೈಲೈಟ್ ಆಗಿದ್ದು, ಅವರ ಪಾತ್ರದ ಆಗಮನವು ಇಡೀ ಕಥೆಯ ಗತಿಯನ್ನೇ ಸಂಪೂರ್ಣವಾಗಿ ಬದಲಿಸುವ ಮುನ್ಸೂಚನೆ ನೀಡಿದೆ. ಉಳಿದಂತೆ ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಹಾಗೂ ಶಶಾಂಕ್ ಪಾಟೀಲ್ ಅವರಭಾವನಾತ್ಮಕ ಹಾಗೂ ತೀವ್ರತೆಯಿಂದ ಕೂಡಿದ ಅಭಿನಯವು ಕಥೆಗೆ ಅತ್ಯಂತ ಪೂರಕವಾಗಿ ಮೂಡಿಬಂದಿದೆ.

ಚಿತ್ರದ ತಾಂತ್ರಿಕ ಮೌಲ್ಯಗಳು ಟ್ರೇಲರ್ ಅನ್ನು ಮತ್ತೊಂದು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ದಿವೆ. ದಿನೇಶ್ ದಿವಾಕರ್ ಅವರ ಛಾಯಾಗ್ರಹಣವು ಭಯಾನಕ ಹಾಗೂ ಆತಂಕಕಾರಿ ವಾತಾವರಣವನ್ನು ಪರಿಣಾಮಕಾರಿಯಾಗಿ ತೆರೆಮೇಲೆ ತಂದಿದ್ದರೆ, ವೆಂಕಿ ಜಿಜಿ ಅವರ ಹಿನ್ನೆಲೆ ಸಂಗೀತ ಪ್ರತಿ ಕ್ಷಣದಲ್ಲೂ ರೋಮಾಂಚನ ಹಾಗೂ ನಡುಕ ಉಂಟುಮಾಡುತ್ತದೆ. ಇನ್ನು ಉಲ್ಲಾಸ್ ಹೈದೂರ್ ರೂಪಿಸಿರುವ ಕಲಾ ನಿರ್ದೇಶನ ಹಾಗೂ ಆ ನಿಗೂಢ ಕಟ್ಟಡದ ಸೆಟ್ ವಿನ್ಯಾಸವು ಕಥೆಯ ಮತ್ತೊಂದು ಜೀವಂತ ಪಾತ್ರದಂತೆ ಕೆಲಸ ಮಾಡಿದ್ದು, ನಿರ್ಮಾಣದ ಗುಣಮಟ್ಟ ಅತ್ಯುತ್ತಮವಾಗಿದೆ. ದಸರಾ ಹಬ್ಬದ ವಿಶೇಷ ಉಡುಗೊರೆಯಾಗಿ ಅಕ್ಟೋಬರ್ 23 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ಚಿತ್ರ ತೆರೆಕಾಣಲಿದ್ದು, ಪ್ರಸ್ತುತ ಬಿಡುಗಡೆಯಾಗಿರುವ ಟ್ರೇಲರ್ ಸಿನಿಪ್ರಿಯರ ವಲಯದಲ್ಲಿ ನಿರೀಕ್ಷೆಯನ್ನು ಮುಗಿಲೆತ್ತರಕ್ಕೇರಿಸಿದೆ.

Category
ಕರಾವಳಿ ತರಂಗಿಣಿ