image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲೂಸ್ ಮಾದ ಯೋಗಿ ಅಭಿನಯದ 51ನೇ ಚಿತ್ರ ಫಾರೆವರ್ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ಲೂಸ್ ಮಾದ ಯೋಗಿ ಅಭಿನಯದ 51ನೇ ಚಿತ್ರ ಫಾರೆವರ್ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ 'ಲೂಸ್ ಮಾದ' ಯೋಗಿ ನಾಯಕನಾಗಿ ನಟಿಸುತ್ತಿರುವ 51ನೇ ಸಿನಿಮಾ "ಫಾರೆವರ್" ಚಿತ್ರದ ಎರಡನೇ ಹಂತದ ಚಿತ್ರೀಕರಣವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ. ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಿಸುತ್ತಿರುವ ಹಾಗೂ "ಚಂದ್ರಿಕಾ" ಚಿತ್ರದ ಖ್ಯಾತಿಯ ಯೋಗೇಶ್ ಎಂ. ನಿರ್ದೇಶನದ ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಬೆಂಗಳೂರಿನಲ್ಲಿ ನಡೆದ ಈ ಹಂತದ ಚಿತ್ರೀಕರಣದಲ್ಲಿ ಹೆಸರಾಂತ ಸಾಹಸ ನಿರ್ದೇಶಕ ರವಿವರ್ಮ ಅವರ ಸಂಯೋಜನೆಯಲ್ಲಿ ಮೈನವಿರೇಳಿಸುವ ಆಕ್ಷನ್ ಸನ್ನಿವೇಶಗಳು ಮತ್ತು ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಅವರ ನೇತೃತ್ವದಲ್ಲಿ ಒಂದು ಭರ್ಜರಿ ಹಾಡಿನ ದೃಶ್ಯಾವಳಿ ಹಾಗೂ ಮಾತಿನ ಭಾಗದ ಪ್ರಮುಖ ಶೂಟಿಂಗ್ ಪೂರ್ಣಗೊಂಡಿದೆ.

ಚಿತ್ರದಲ್ಲಿ ನಾಯಕ ಯೋಗಿ ಜೊತೆಗೆ ನಾಯಕಿ ಆಕಾಂಕ್ಷ ರಾವ್, ಪ್ರಮೋದ್ ಶೆಟ್ಟಿ, ವಿಜಯ್ ಚೆಂಡೂರ್, ಗೌರವ್ ಶೆಟ್ಟಿ, ಅಶ್ವಿನ್ ಪಲ್ಲಕ್ಕಿ, ಮಾಲಾ, ಕಡ್ಡಿಪುಡಿ ಚಂದ್ರು, ಅನಂತ್ ಮುಂತಾದ ಅನುಭವಿ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶೀಘ್ರದಲ್ಲೇ ಚಿತ್ರದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಬೇಕಾದ ಲವ್, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ಎಲ್ಲಾ ಮನರಂಜನಾ ಅಂಶಗಳೂ ಇವೆ. ನಿರ್ದೇಶಕರೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದು, ರಘು ನಿಡುವಳ್ಳಿ ಅವರ ಸಂಭಾಷಣೆ, ಪ್ರದ್ಯೂತನ್ ಅವರ ಸಂಗೀತ ಹಾಗೂ ಸಂಕೇತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಗೊಂಡು ಭಾರಿ ಸದ್ದು ಮಾಡಿರುವ ಈ ಚಿತ್ರದ ಫಸ್ಟ್ ಲುಕ್‌ನಲ್ಲಿ ಯೋಗಿ ಅವರು ಬೈಕ್ ಲವರ್ ಪಾತ್ರದಲ್ಲಿ ಕಂಗೊಳಿಸುತ್ತಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ.

Category
ಕರಾವಳಿ ತರಂಗಿಣಿ