image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮರೆಯಾದ ಭಾರತೀಯ ಚಿತ್ರರಂಗದ ದಿಗ್ಗಜ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಿಂದ ಭಾವಪೂರ್ಣ ಶ್ರದ್ದಾಂಜಲಿ

ಮರೆಯಾದ ಭಾರತೀಯ ಚಿತ್ರರಂಗದ ದಿಗ್ಗಜ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಿಂದ ಭಾವಪೂರ್ಣ ಶ್ರದ್ದಾಂಜಲಿ

ಬೆಂಗಳೂರು: ಸಿನಿಮಾ ಎಂದರೆ ಕೇವಲ ಕಥೆಯನ್ನು ತೆರೆಗೆ ತರುವುದು ಮಾತ್ರವಲ್ಲ; ಅದರಲ್ಲಿ ಹೊಸತನವನ್ನು ಹುಡುಕುವುದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುವುದು ಎಂಬುದನ್ನು ತಮ್ಮ ಸುದೀರ್ಘ ಪಯಣದ ಮೂಲಕ ತೋರಿಸಿದವರು ಸಿಂಗೀತಂ ಶ್ರೀನಿವಾಸರಾವ್. ಭಾರತೀಯ ಚಿತ್ರರಂಗದ ಅಪರೂಪದ ಪ್ರಯೋಗಶೀಲ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು, ಹಲವು ಭಾಷೆಗಳಲ್ಲಿ ವಿಭಿನ್ನ ಬಗೆಯ ಚಿತ್ರಗಳನ್ನು ನೀಡಿದ್ದಾರೆ. ಕೆ.ವಿ. ರೆಡ್ಡಿಯವರ ಬಳಿ ಸಹಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಸಿಂಗೀತಂ, ತಮ್ಮದೇ ಆದ ಸೃಜನಶೀಲತೆಯೊಂದಿಗೆ ಬೆಸೆದುಕೊಂಡರು. ಸಾಮಾಜಿಕ ಕಥೆಗಳಿಂದ ಹಾಸ್ಯ, ಫ್ಯಾಂಟಸಿ, ವಿಜ್ಞಾನಕಲ್ಪನೆ, ಅನಿಮೇಷನ್‌ವರೆಗೆ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದರು. ಪುಷ್ಪಕ ವಿಮಾನ, ಅದಿತ್ಯ 369, ಅಪೂರ್ವ ಸಹೋದರರು, ಮೈಕೆಲ್ ಮದನ ಕಾಮರಾಜನ್ ಮುಂತಾದ ಚಿತ್ರಗಳು ಅವರ ಕಲ್ಪನಾಶಕ್ತಿಗೆ ಸಾಕ್ಷಿಯಾಗಿದೆ.

ಕನ್ನಡ ಚಿತ್ರರಂಗದೊಂದಿಗೆ ಸಿಂಗೀತಂ ಅವರ ನಂಟು ವಿಶೇಷವಾದದ್ದು. ಅದರಲ್ಲೂ ವರನಟ ಡಾ. ರಾಜ್‌ಕುಮಾರ್ ಅವರೊಂದಿಗಿನ ಒಡನಾಟ ಅಮರವಾದದ್ದು.  ಆ ಪ್ರಕಾರವಾಗಿ ಹಾಲು ಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಾಗ್ಯದ ಲಕ್ಷ್ಮೀ ಬಾರಮ್ಮ ಮುಂತಾದ ಚಿತ್ರಗಳನ್ನು ನೀಡಿದರು. ರಾಜ್‌ಕುಮಾರ್ ಅವರ ಅಭಿನಯದ ಗಂಭೀರತೆ, ಸರಳತೆ ಮತ್ತು ಹಾಸ್ಯಪ್ರತಿಭೆಯನ್ನು ವಿಭಿನ್ನ ರೀತಿಯಲ್ಲಿ ತೆರೆಗೆ ತಂದ ಕೀರ್ತಿ ಸಿಂಗೀತಂ ಅವರಿಗೆ ಸಲ್ಲುತ್ತದೆ. ಕನ್ನಡದ ಕೌಟುಂಬಿಕ ಭಾವನೆ, ಹಾಸ್ಯ ಮತ್ತು ಸಂಗೀತವನ್ನು ತಮ್ಮದೇ ಆದ ನಿರೂಪಣಾ ಶೈಲಿಯೊಂದಿಗೆ ಬೆಸೆದು ಪ್ರೇಕ್ಷಕರ ಮನ ಗೆದ್ದರು. ಭಾರತೀಯ ಸಿನಿಮಾದ ಸಾಧ್ಯತೆಗಳನ್ನು ವಿಸ್ತರಿಸಿದ ಈ ಕನಸುಗಾರನ ಪಯಣವೂ ಕನ್ನಡ ಚಿತ್ರಂಗದಲ್ಲಿ ಒಂದು ಸುಂದರ, ಮರೆಯಲಾಗದ ಅಧ್ಯಾಯ. ಇಂತಹ ಮಹಾನ್ ಭಾರತೀಯ ಚಿತ್ರರಂಗದ ದಿಗ್ಗಜ 1931ರ ಸೆಪ್ಟಂಬರ್ 21ರಂದು ಆಂದ್ರಪ್ರದೇಶದ ಗುಡೂರಿನಲ್ಲಿ ಜನಿಸಿದ ಸಿಂಗೀತಂ ಶ್ರೀನಿವಾಸರಾವ್ ತನ್ನ 95ನೇ ವರ್ಷದಲ್ಲಿ ಚೆನ್ನೈನಲ್ಲಿ ಅಕ್ಟೋಬರ್ 3ರಂದು ಕೊನೆಯುಸಿರೆಳೆದರು. ನಮ್ಮ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರೂ ಕೂಡ ಆಗಿರುವ ಸಿಂಗೀತಂ ಶ್ರೀನಿವಾಸರಾವ್ ಅವರಿಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದ್ದಾರೆ

Category
ಕರಾವಳಿ ತರಂಗಿಣಿ