ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿ ಕ್ರಾಂತಿಯ ಕಿಡಿ ಹೊತ್ತಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಅಮರ ತ್ಯಾಗಗಾಥೆ ಈಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ 13 ಎಕರೆ ವಿಸ್ತೀರ್ಣದ 'ವೀರಭೂಮಿ ಮ್ಯೂಸಿಯಂ'ನಲ್ಲಿ ದೃಶ್ಯರೂಪ ಪಡೆದುಕೊಂಡಿದೆ. ನಿರ್ದೇಶಕ ಹಾಗೂ ಛಾಯಾಗ್ರಾಹಕರಾದ ಅನಿಲ್ ಅಣ್ಣಯ್ಯ ಅವರು ಸೆಪ್ಟೆಂಬರ್ 27ರಂದು ಈ ಐತಿಹಾಸಿಕ ಭೂಮಿಗೆ ಭೇಟಿ ನೀಡಿ, ತಾವು ನಿರ್ದೇಶಿಸಿದ ಬಯೋಪಿಕ್ ಚಿತ್ರಗಳು ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳುತ್ತಿರುವುದನ್ನು ಕಂಡು ರೋಮಾಂಚನಗೊಂಡರು.
ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಿಂದ 2026ರ ಜನವರಿ 19 ರಂದು ಲೋಕಾರ್ಪಣೆಗೊಂಡ ಈ ಬೃಹತ್ ಸಾಂಸ್ಕೃತಿಕ ತಾಣವು, ರಾಯಣ್ಣನ ಕಾಲಘಟ್ಟದ ಸನ್ನಿವೇಶಗಳನ್ನು ಡಿಜಿಟಲ್ ವಿಡಿಯೋ ಸ್ಕ್ರೀನ್‌ಗಳ ಮೂಲಕ ಸಿನಿಮ್ಯಾಟಿಕ್ ಆಗಿ ಮರುಸೃಷ್ಟಿಸಿದೆ. ಮ್ಯೂಸಿಯಂಗೆ ಆಗಮಿಸುತ್ತಿರುವ ಪ್ರವಾಸಿಗರು ಚಿತ್ರಗಳನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸುತ್ತಿದ್ದು, ರಾಯಣ್ಣನ ಕಥೆಯನ್ನು ಭಾವುಕವಾಗಿ ಮೂಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಜನರ ಈ ಸಕಾರಾತ್ಮಕ ಸ್ಪಂದನೆ ಹಾಗೂ ಪ್ರೇಕ್ಷಕರ ನೇರ ಅಭಿನಂದನೆಯಿಂದ ಭಾವುಕರಾದ ಅನಿಲ್ ಅಣ್ಣಯ್ಯ, "ಈ ಚಿತ್ರಗಳ ನಿರ್ಮಾಣದ ಹಿಂದೆ ಸುದೀರ್ಘ ಶ್ರಮ ಹಾಗೂ ಪ್ರತಿಯೊಂದು ಸಣ್ಣ ವಿವರಕ್ಕೂ ನೀಡಿದ ಆದ್ಯತೆ ಇದೆ. ಇಂದು ಆ ಶ್ರಮ ಪ್ರೇಕ್ಷಕರ ಅನುಭವದ ಮೂಲಕ ಸಾರ್ಥಕತೆ ಪಡೆಯುತ್ತಿರುವುದು ಅತ್ಯಂತ ತೃಪ್ತಿದಾಯಕ ಅನುಭವ" ಎಂದು ಹಂಚಿಕೊಂಡಿದ್ದಾರೆ.
ದಶಕಗಳ ಅನುಭವ ಹೊಂದಿರುವ ಅನಿಲ್ ಅಣ್ಣಯ್ಯ ಅವರು 'ಆನ್‌ಲೀಲಾ ಫಿಲ್ಮ್ಸ್' ಮೂಲಕ ಈ ದೃಶ್ಯಕಾವ್ಯವನ್ನು ತೆರೆಗೆ ತಂದಿದ್ದು, ಈ ಸಾಹಸಕ್ಕೆ ಸಹಕರಿಸಿದ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಹಾಗೂ ತಾಂತ್ರಿಕ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೀರಭೂಮಿಯಲ್ಲಿ ಸಿಕ್ಕ ಈ ಅಭೂತಪೂರ್ವ ಯಶಸ್ಸು ಮುಂಬರುವ ದಿನಗಳಲ್ಲಿ ಇನ್ನಷ್ಟು ಐತಿಹಾಸಿಕ ಹಾಗೂ ಸಾಂಸ್ಕೃತಿಕ 'ಲಿಗಸಿ ಫಿಲ್ಮ್ಸ್' ನಿರ್ಮಿಸಲು ಹೊಸ ಸಂಕಲ್ಪ ಮೂಡಿಸಿದೆ. ನಾಡಿನ ಇತಿಹಾಸವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ನಂದಗಡದ ವೀರಭೂಮಿ ಮ್ಯೂಸಿಯಂಗೆ ಭೇಟಿ ನೀಡುವಂತೆ ಮುಕ್ತ ಆಹ್ವಾನವಿದೆ.