image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರ ಕೈಯಲ್ಲಿ ಹೊರಬಂತು ತರಂಗಾಂತರಂಗ ಟೀಸರ್

ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರ ಕೈಯಲ್ಲಿ ಹೊರಬಂತು ತರಂಗಾಂತರಂಗ ಟೀಸರ್

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, 'ತರಂಗಾಂತರಂಗ' ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. 

ಕರ್ನಾಟಕದ ಕಡಲ ತೀರದ ಅನೇಕ ಪ್ರತಿಭೆಗಳು ಪ್ರತಿ ವರ್ಷ ಕನ್ನಡ ಚಿತ್ರರಂಗಕ್ಕೆ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಹಾಗೂ ತಂತ್ರಜ್ಞರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಈಗ ಈ ಸಾಲಿಗೆ ಉಡುಪಿಯ ಬೈಂದೂರು ಮೂಲದ ಯುವ ಪ್ರತಿಭೆ ಶ್ರೀಷ ಸೇರ್ಪಡೆಯಾಗುತ್ತಿದ್ದಾರೆ. ಗ್ರಾಫಿಕ್ಸ್ ಡಿಸೈನರ್ ಹಾಗೂ ಇವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವವಿರುವ ಶ್ರೀಷ, 'ತರಂಗಾಂತರಂಗ' ಚಿತ್ರದ ಮೂಲಕ ನಾಯಕ ನಟನಾಗಿ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮೊದಲ ಟೀಸರ್ ಬಿಡುಗಡೆಗೊಂಡಿದೆ.

ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಎನ್.ಆರ್.ಕೆ ವಿಶ್ವನಾಥ್, ಕರಾವಳಿ ಮೂಲದ ಹೊಸ ಪ್ರತಿಭೆಗಳು ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ಸಿನಿಮಾದ ಟೀಸರ್‌ನಲ್ಲಿ ಹೊಸತನ ಕಾಣುತ್ತಿದ್ದು, ಕಥೆ ಕೂಡ ಗಮನ ಸೆಳೆಯುವಂತಿದೆ. ಸಿನಿಮಾ ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆದು ಯಶಸ್ವಿಯಾಗಲಿ ಎಂದು ಹಾರೈಸಿದರು.

ಇದೇ ವೇಳೆ ಮಾತನಾಡಿದ ನಾಯಕ ನಟ ಹಾಗೂ ನಿರ್ದೇಶಕ ಶ್ರೀಷ, ಇದೊಂದು ಪುನರ್ಜನ್ಮದ ಕಥೆ ಹೊಂದಿರುವ ಚಿತ್ರ. ನಾವು ದೇವರಿಗೆ ಕಟ್ಟಿಕೊಂಡ ಹರಕೆ ಅಥವಾ ಸೇವೆಗಳನ್ನು ತೀರಿಸಲು ವಿಫಲವಾದರೆ ಏನೆಲ್ಲಾ ಆಗಬಹುದು ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಹಿಸ್ಟರಿ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯುನಿಫಾರ್ಮ್ ಧರಿಸಿ ಈ ಪಾತ್ರದಲ್ಲಿ ಅಭಿನಯಿಸಿದ್ದೇನೆ ಮತ್ತು ಚಿತ್ರತಂಡದ ಜೊತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ ಎಂದು ತಿಳಿಸಿದರು. ಉಳಿದಂತೆ ನಟಿ ಚೆರಿಕಾ ಮೂರ್ತಿ ಮತ್ತು ಛಾಯಾಗ್ರಹಕ ವೆಂಕಟೇಶ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಚಿತ್ರದಲ್ಲಿ ಶ್ರೀಷ ಅವರಿಗೆ ಚೆರಿಕಾ ಮೂರ್ತಿ ಮತ್ತು ಯಶಸ್ವಿನಿ ಸ್ವಾಮಿ ನಾಯಕಿಯರಾಗಿದ್ದಾರೆ. ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಲಿಖಿತಾ ಶೆಟ್ಟಿ, ಮುರಳಿ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಮರೆಯಾದ ದಿವಂಗತ ದಿನೇಶ್ ಮಂಗಳೂರು ಮತ್ತು ದಿವಂಗತ ರಾಕೇಶ್ ಪೂಜಾರಿ ಕೊನೆಯದಾಗಿ ಈ ಚಿತ್ರಕ್ಕೆ ಬಣ್ಣ ಹಚ್ಚಿರುವುದು ವಿಶೇಷವಾಗಿದೆ.

ಸದ್ಯ ಟೀಸರ್ ಬಿಡುಗಡೆಗೊಳಿಸಿ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ಜನವರಿ ತಿಂಗಳಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಯೋಜನೆ ರೂಪಿಸಿದೆ.

Category
ಕರಾವಳಿ ತರಂಗಿಣಿ