image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಘಮ: ಸೋಪಿನ ಕಥೆಯೊಂದಿಗೆ ಮೊದಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ ವಿದ್ಯಾಲಕ್ಷ್ಮೀ ಪ್ರಹ್ಲಾದ್

ಘಮ: ಸೋಪಿನ ಕಥೆಯೊಂದಿಗೆ ಮೊದಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ ವಿದ್ಯಾಲಕ್ಷ್ಮೀ ಪ್ರಹ್ಲಾದ್

ಕುಲವಧು, ನಮ್ಮನೆ ಯುವರಾಣಿ, ಪವಿತ್ರ ಬಂಧನ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಿಗೆ ಕಥೆ ಹಾಗೂ ಚಿತ್ರಕಥೆ ಬರೆದಿರುವ ಎಂ. ವಿದ್ಯಾಲಕ್ಷ್ಮೀ ಪ್ರಹ್ಲಾದ್ ಈಗ "ಘಮ" ಎಂಬ ಕಿರುಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ. "ಪರಿಮಳಕ್ಕೆ ಪರವಶ" ಎಂಬ ಅಡಿಬರಹ ಹೊಂದಿರುವ ಈ ಕಿರುಚಿತ್ರದ ಅನಾವರಣ ಸಮಾರಂಭವು ಇತ್ತೀಚೆಗೆ ನೆರವೇರಿದೆ.

ಹಳ್ಳಿಯ ಮುಗ್ಧ ಬಾಲೆ ಹಾಗೂ ಒಂದು ಘಮಘಮಿಸುವ ಸೋಪಿನ ನಡುವೆ ಹೆಣೆದಿರುವ ಈ ಕಥೆ ಕೇವಲ 14 ನಿಮಿಷಗಳಲ್ಲೇ ಎಲ್ಲರ ಗಮನ ಸೆಳೆಯುತ್ತದೆ. ಶ್ರೀಕೃಷ್ಣ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆದರ್ಶ ಅಯ್ಯಂಗಾರ್ ನಿರ್ಮಿಸಿರುವ ಈ ಕಿರುಚಿತ್ರವನ್ನು ಹೆಸರಾಂತ ಲೇಖಕ ಹಾಗೂ ಸಂಪಾದಕರಾದ ಜೋಗಿ, ಭಾವನಾ ಬೆಳಗೆರೆ, ಶ್ರೀವಿದ್ಯಾ ರಾಜ್ ಹಾಗೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಬಿಡುಗಡೆ ಮಾಡಿದರು. ವೀಕ್ಷಣೆಯ ಬಳಿಕ ಗಣ್ಯರು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಕುರಿತು ಮಾತನಾಡಿದ ನಿರ್ದೇಶಕಿ ಎಂ. ವಿದ್ಯಾಲಕ್ಷ್ಮೀ ಪ್ರಹ್ಲಾದ್, ನನ್ನ ಬಾಲ್ಯದ ಕೆಲವು ಘಟನೆಗಳೇ ಈ ಕಥೆ ಬರೆಯಲು ಸ್ಪೂರ್ತಿ ಎಂದರು. ಕಥೆ ಕೇಳಿದ ಕೂಡಲೇ ನಿರ್ಮಾಪಕ ಆದರ್ಶ ಅಯ್ಯಂಗಾರ್ ನಿರ್ಮಾಣಕ್ಕೆ ಮುಂದಾದರು ಎಂದು ತಿಳಿಸಿದ ಅವರು, ಚಿತ್ರಕ್ಕೆ ಡಬ್ಬಂಗ್ ಮಾಡದೆ ಸ್ಥಳದಲ್ಲೇ ಸಿಂಕ್ ಸೌಂಡ್ ಬಳಸಲಾಗಿದೆ ಹಾಗೂ ನನ್ನ ಮಗಳು ಗೌರಿ ಮನೋಹರಿ "ಘಮ" ಶೀರ್ಷಿಕೆ ನೀಡಿದ್ದಾರೆ ಎಂದು ನೆನಪಿಸಿಕೊಂಡರು.

ನಟ ಹಾಗೂ ನಿರ್ಮಾಪಕ ಆದರ್ಶ ಅಯ್ಯಂಗಾರ್ ಮಾತನಾಡಿ, 1990ರ ಸೊಗಡನ್ನು ಮರುಸೃಷ್ಟಿಸುವುದು ಸವಾಲಿನ ಕೆಲಸವಾಗಿತ್ತು. ಚಿಕ್ಕದಾದರೂ ಚೊಕ್ಕವಾಗಿರಬೇಕು ಎಂಬ ಕಾರಣಕ್ಕೆ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿ, ನಾಲ್ಕು ದಿನಗಳ ಕಾಲ ಮಲೆನಾಡಿನ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಟಿ ಪ್ರಜ್ಞಾ ಶೆಟ್ಟಿ, ಬಾಲ ಕಲಾವಿದೆ ವಜ್ರ ಭಾರ್ಗವಿ, ಫಾತಿಮಾ ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡರು.

Category
ಕರಾವಳಿ ತರಂಗಿಣಿ