ಬೆಂಗಳೂರು : ಪ್ರಸಿದ್ಧ ಉದ್ಯಮಿ, ಸಮಾಜಸೇವಕ ಡಾ. ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಅವರು ಇದೀಗ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ‘ಪಂಚರಂಗಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ತಮ್ಮ ಚೊಚ್ಚಲ ‘ಅಮರ್ಥ’ ಚಿತ್ರದ ಮೂಲಕ ಅವರು ಗಾಂಧಿನಗರಕ್ಕೆ ಕಾಲಿಟ್ಟಿದ್ದು, ಸಿನಿಮಾ ರಂಗದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಮಹದಾಸೆ ಹೊಂದಿದ್ದಾರೆ. ಹಲವಾರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಅಸಹಾಯಕರ ಕಣ್ಣೀರು ಒರೆಸುವ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಶೆಟ್ಟಿ ಅವರ ಈ ಹೊಸ ಪ್ರಯತ್ನ ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು. ಖ್ಯಾತ ಉದ್ಯಮಿ ಹಾಗೂ ಕೊಡುಗೈ ದಾನಿ ಡಾ. ಬಂಜಾರ ಪ್ರಕಾಶ್ ಶೆಟ್ಟಿ ಮತ್ತು ‘ಲವ್ ಮಾಕ್ಟೇಲ್’ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಅವರು ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ಎಲ್ಲಾ ಕಲಾವಿದರು ಹಾಗೂ ತಾಂತ್ರಿಕ ಬಳಗದ ಪ್ರಮುಖರು ಭಾಗವಹಿಸಿ ಸಂಭ್ರಮ ಹಂಚಿಕೊಂಡರು.
ಗುರು ಹೆಗಡೆ ಮತ್ತು ವಿನಯ್ ಪ್ರೀತಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದ್ವಿಗುಣಗೊಳಿಸಿವೆ. ಬಿಡುಗಡೆಯ ಅಂತಿಮ ಹಂತದಲ್ಲಿರುವ ‘ಅಮರ್ಥ’ ಸಿನಿಮಾವು ಬರುವ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಪ್ರಮುಖ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.