ಹೈದರಾಬಾದ್ : ಭಾರತೀಯ ನಟ-ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಸಿರುದ್ಧೀನ್ ಶಾ, ಅಲಿ ಫಜಲ್, ವಿದ್ಯುತ್ ಜಾಮ್ವಾಲ್, ಅನುಪಮ್ ಖೇರ್ ಹಾಗೂ ಧನುಶ್ ಅವರಂತಹ ದಕ್ಷಿಣ ಮತ್ತು ಉತ್ತರ ಭಾರತದ ಪ್ರಮುಖ ತಾರೆಯರು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇದಕ್ಕೆ ವಿರುದ್ಧವಾಗಿ ಹಾಲಿವುಡ್‌ನ ಖ್ಯಾತ ನಟರು ಭಾರತೀಯ ಸಿನಿಮಾಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಭಿನಯಿಸುವುದು ಬಹಳ ಅಪರೂಪವಾಗಿತ್ತು. ಆದರೆ ಧನುಶ್ ಅಭಿನಯದ 'ಜಗಮೇ ತಾಂದಿರಮ್' ಹಾಗೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ 'ಆರ್ಆರ್ಆರ್' ಚಿತ್ರಗಳ ಬಳಿಕ ಈ ಹೊಸ ಸಂಪ್ರದಾಯ ಹೆಚ್ಚಾಗುತ್ತಿದೆ.
ಇದೀಗ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ 'ರಣಬಾಲಿ' ಸಿನಿಮಾದಲ್ಲಿ ಹಾಲಿವುಡ್‌ನ ಪ್ರಸಿದ್ಧ ನಟ ಅರ್ನಾಲ್ಡ್ ವೋಸ್ಲೊ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ರಣಬಾಲಿ' ಸಿನಿಮಾದ ಟೀಸರ್‌ನಲ್ಲಿ ಅರ್ನಾಲ್ಡ್ ಅವರ ಪಾತ್ರದ ಸಣ್ಣ ಝಲಕ್ ತೋರಿಸಲಾಗಿದ್ದು, ಭಾರತೀಯ ಸಿನಿಮಾ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬ್ರಿಟಿಷರ ಆಡಳಿತ ಹಾಗೂ ಅವರ ದೌರ್ಜನ್ಯದ ವಿರುದ್ಧ ಹೋರಾಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದ್ದು, ಅರ್ನಾಲ್ಡ್ ವೋಸ್ಲೊ ಕ್ರೂರ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವಪ್ರಸಿದ್ಧ 'ದಿ ಮಮ್ಮಿ' ಸಿನಿಮಾದಲ್ಲಿ 'ಇಮ್‌ಹೋಟೆಪ್' ಎಂಬ ಭಯಾನಕ ವಿಲನ್ ಪಾತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಮನೆಮಾತಾಗಿದ್ದ 64 ವರ್ಷದ ಅರ್ನಾಲ್ಡ್ ವೋಸ್ಲೊ, ತಮ್ಮ ಬೋಡು ತಲೆ ಹಾಗೂ ಕಟ್ಟುಮಸ್ತಾದ ಶರೀರದ ವೈಶಿಷ್ಟ್ಯದಿಂದಲೇ ಪ್ರೇಕ್ಷಕರ ಗಮನ ಸೆಳೆದವರು. 'ದಿ ಮಮ್ಮಿ' ಸರಣಿಯಷ್ಟೇ ಅಲ್ಲದೆ 'ಏಜೆಂಟ್ ಕೋಡಿ ಬ್ಯಾಂಕ್ಸ್', 'ಡಾರ್ಕ್‌ಮ್ಯಾನ್', ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ 'ಬ್ಲಡ್ ಡೈಮಂಡ್', 2008ರ 'ಒಡೆಸಿಯಸ್', 'ಫೈರ್ ಆಂಡ್ ಐಸ್' ಹಾಗೂ 'ಜಿ.ಐ. ಜೋ' ಸರಣಿಯ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಅಬ್ಬರಿಸಿದ್ದ ಈ ಜಾಗತಿಕ ಖಳನಟ ಈಗ ದಕ್ಷಿಣ ಭಾರತದ 'ರಣಬಾಲಿ' ಚಿತ್ರದಲ್ಲಿ ವಿಜಯ್ ದೇವರಕೊಂಡ ವಿರುದ್ಧ ಅಖಾಡಕ್ಕಿಳಿದಿರುವುದು ಭಾರತೀಯ ಚಿತ್ರರಂಗದ ಬೆಳೆಯುತ್ತಿರುವ ಜಾಗತಿಕ ಪ್ರಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. 'ರಣಬಾಲಿ' ಚಿತ್ರದಲ್ಲಿ ಅರ್ನಾಲ್ಡ್ ವೋಸ್ಲೊ ಮತ್ತು ವಿಜಯ್ ದೇವರಕೊಂಡ ನಡುವಿನ ಮುಖಾಮುಖಿಯ ದೃಶ್ಯಗಳು ಬೆಳ್ಳಿತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿವೆ ಎಂದು ನಿರೀಕ್ಷಿಸಲಾಗಿದೆ.