ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು ಪುಷ್ಪ-2. ಡಿಸೆಂಬರ್ 6ಕ್ಕೆ ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗ್ತಿದ್ದು, ಪುಷ್ಪ ಸೀಕ್ವೆಲ್ ತೆರೆಗೆ ಬರೋದಿಕ್ಕೆ ಹೆಚ್ಚು ಕಮ್ಮಿ 50 ದಿನಗಳು ಬಾಕಿ ಉಳಿದಿವೆ. ಈಗ ಚಿತ್ರತಂಡ ಪುಷ್ಪರಾಜ್ ನ ಹೊಸ ಲುಕ್ ಬಿಟ್ಟು ಕಿಕ್ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಚಿತ್ರತಂಡ ಕಾಲು ಮೇಲೆ ಕಾಲು ಹಾಕಿ ಸೀರಿಯಸ್ ಮೋಡ್‌ನಲ್ಲಿ ಕುಳಿತಿರುವ ಪುಷ್ಪ ರಾಜ್ ಪೋಸ್ಟರ್ ಅನಾವರಣ ಮಾಡಿದೆ. ಈ ಹೊಸ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪುಷ್ಪ 2 ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡಿದ್ದು, ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಮೈತ್ರಿ ಮೂವೀ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ನಿರ್ಮಾಣದಡಿ ಮೂಡಿ ಬರುತ್ತಿರುವ ಪುಷ್ಪ ಸೀಕ್ವೆಲ್ ಗಾಗಿ ರಾಕ್ ಸ್ಟಾರ್ ದೇವಿಪ್ರಸಾದ್ ಸಂಗೀತ, ಮಿರೆಸ್ಲೋ ಕುಬಾ ಬ್ರೋಜೆಕ್ ಛಾಯಾಗ್ರಾಹಣ ಒದಗಿಸಿದ್ದಾರೆ.
ಈ ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲು ಅರ್ಜುನ್ ಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಪುಷ್ಪ ದಿ ರೂಲ್ ಸಿನಿಮಾವನ್ನು ಆಗಸ್ಟ್ 15ಕ್ಕೆ ಚಿತ್ರತಂಡ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಬಳಿಕ ಚಿತ್ರದ ಕೆಲಸಗಳು ಬಾಕಿ ಉಳಿದಿದ್ದರಿಂದ ಬಿಡುಗಡೆ ದಿನಾಂಕವನ್ನು ಪೋಸ್ಟ್ ಪೋನ್ ಮಾಡಲಾಗಿತ್ತು. ಡಿಸೆಂಬರ್ 6ಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿರುವ ಪುಷ್ಪರಾಜ್ ತಗ್ಗೋದೇ ಇಲ್ಲ ಅಂತಾ ತೆರೆಗಪ್ಪಳಿಸಲಿದ್ದಾನೆ.