image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐತಿಹಾಸಿಕ ಊರ್ವಶಿ ಚಿತ್ರಮಂದಿರ ನೆಲಸಮ: ಕೊನೆಯಾಯ್ತು 55 ವರ್ಷಗಳ ಸಿನಿ ಪಯಣ

ಐತಿಹಾಸಿಕ ಊರ್ವಶಿ ಚಿತ್ರಮಂದಿರ ನೆಲಸಮ: ಕೊನೆಯಾಯ್ತು 55 ವರ್ಷಗಳ ಸಿನಿ ಪಯಣ

ಬೆಂಗಳೂರು: ನಗರದ ಹೃದಯಭಾಗ ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿರುವ ಪ್ರಸಿದ್ಧ 'ಊರ್ವಶಿ' ಚಿತ್ರಮಂದಿರದ ಸುದೀರ್ಘ ಸಿನಿ ಪಯಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುಮಾರು ಎಂಟು ವರ್ಷಗಳಿಂದ ನಡೆಯುತ್ತಿದ್ದ ಜಾಗದ ಲೀಸ್ ವಿವಾದಕ್ಕೆ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಅಂತ್ಯ ಸಿಕ್ಕಿದ್ದು, ಭೂ ಮಾಲೀಕರು ಜಾಗವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಸೋಮವಾರದಿಂದ ಕಟ್ಟಡ ತೆರವುಗೊಳಿಸುವ ಪ್ರಕ್ರಿಯೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆರಂಭವಾಗಿದೆ.

1970ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡಿದ್ದ ಈ ಚಿತ್ರಮಂದಿರ ಕಳೆದ 55 ವರ್ಷಗಳಲ್ಲಿ 5 ಭಾಷೆಗಳ 5,000ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಸುಮಾರು 1,100 ಆಸನ ವ್ಯವಸ್ಥೆ ಹಾಗೂ ಭಾರತದಲ್ಲೇ ಅತ್ಯುತ್ತಮ ಎನಿಸಿಕೊಂಡಿದ್ದ ಸೌಂಡ್ ತಂತ್ರಜ್ಞಾನ ಹೊಂದಿದ್ದ ಊರ್ವಶಿ, ಚಿತ್ರಪ್ರೇಮಿಗಳು ಮತ್ತು ನಟರ ಅಭಿಮಾನಿಗಳಿಗೆ ನೆಚ್ಚಿನ ತಾಣವಾಗಿತ್ತು. 2018ರ ಏಪ್ರಿಲ್‌ನಲ್ಲೇ ಬಸಟ್ಟಿ ಶೆಟ್ಟಿ ಅವರ ಗುತ್ತಿಗೆ ಅವಧಿ ಮುಗಿದಿತ್ತಾದರೂ ಕಾನೂನು ಹೋರಾಟ ಮುಂದುವರಿದಿತ್ತು.

'ಬಾಹುಬಲಿ 2', 'ಕೆಜಿಎಫ್ 2', 'ಕಬಾಲಿ', 'ಕಾಂತಾರ', 'ಜೈಲರ್' ಹಾಗೂ 'ಭೀಮ' ಮುಂತಾದ ಬ್ಲಾಕ್‌ಬಸ್ಟರ್ ಸಿನಿಮಾಗಳ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಈ ಚಿತ್ರಮಂದಿರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ನೋಡಬೇಕೆಂಬ ಅಭಿಮಾನಿಗಳ ಆಸೆ ಈಗ ನಿರಾಸೆಯಾಗಿದೆ. ಕಟ್ಟಡ ನೆಲಸಮಗೊಂಡು ಪ್ರದರ್ಶನದ ಪರದೆ ಕಳಚಿ ಬಿದ್ದರೂ, ಊರ್ವಶಿ ನೀಡಿದ ಬೆಳ್ಳಿಪರದೆಯ ನೆನಪುಗಳು ಬೆಂಗಳೂರಿಗರ ಮನದಲ್ಲಿ ಎಂದೆಂದಿಗೂ ಜೀವಂತವಾಗಿರಲಿವೆ.

Category
ಕರಾವಳಿ ತರಂಗಿಣಿ