ಹೈದರಾಬಾದ್ : ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ತೆಲುಗಿನ 'ಇರುಮುಡಿ' ಸಿನಿಮಾವನ್ನು ತೆಗೆದು, ಆ ಜಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾವನ್ನು ಪ್ರದರ್ಶಿಸಲು ಹೈದರಾಬಾದ್ನ Asian/SVC ಸಂಸ್ಥೆಯ ಚಿತ್ರಮಂದಿರಗಳು ಮುಂದಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೈದರಾಬಾದ್ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ 2 ಸ್ಕ್ರೀನ್ಗಳಿರುವ ಥಿಯೇಟರ್ಗಳಲ್ಲೂ ಎರಡಕ್ಕೂ 'ಟಾಕ್ಸಿಕ್' ಚಿತ್ರವನ್ನೇ ಚಾರ್ಟ್ ಮಾಡಲಾಗಿದ್ದು, ಇದರಿಂದ ತೆಲುಗು ಚಿತ್ರರಂಗದ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮುಖ ವಿತರಕರಾದ ದಿಲ್ ರಾಜು ಅವರು ಈ ಸಿನಿಮಾದ ತೆಲುಗು ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿರುವುದರಿಂದ 'ಟಾಕ್ಸಿಕ್' ಸಿನಿಮಾವನ್ನು ಬೃಹತ್ ಪ್ರಮಾಣದಲ್ಲಿ ಬಿಡುಗಡೆ ಮಾಡುವುದು ಸಹಜ. ಆದರೆ, ಸ್ವತಃ ತೆಲುಗು ಮಾರುಕಟ್ಟೆಯಲ್ಲೇ ಯಶಸ್ವಿಯಾಗಿ ಓಡುತ್ತಿರುವ ಸಿನಿಮಾವನ್ನು ತೆರವುಗೊಳಿಸಿ ಕನ್ನಡ ಮೂಲದ ಚಿತ್ರವೊಂದಕ್ಕೆ ಹೈದರಾಬಾದ್ನಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರರಂಗದ ಇತಿಹಾಸದಲ್ಲೇ ಅಭೂತಪೂರ್ವ ಘಟನೆ ಎನಿಸಿಕೊಂಡಿದೆ.
ಈ ಬೆಳವಣಿಗೆಯು ಎಕ್ಸ್ (Twitter) ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಮತ್ತು ತೆಲುಗು ಸಿನಿಪ್ರೇಮಿಗಳ ನಡುವೆ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ವರ್ಷಗಳಿಂದ ಕರ್ನಾಟಕದ ಸಿಂಗಲ್ ಸ್ಕ್ರೀನ್ ಹಾಗೂ ಪಿವಿಆರ್ಗಳಲ್ಲಿ ಕನ್ನಡಿಗರು ಇದೇ ಅನುಭವವನ್ನು ಎದುರಿಸುತ್ತಿದ್ದರು. ಹೈಪ್ ಇರುವ ತೆಲುಗು ಅಥವಾ ತಮಿಳು ಸಿನಿಮಾಗಳು ಬಂದಾಗ, ಉತ್ತಮವಾಗಿ ಓಡುತ್ತಿದ್ದ ಕನ್ನಡ ಸಿನಿಮಾಗಳನ್ನೇ ತೆಗೆದು ಪರಭಾಷಾ ಚಿತ್ರಗಳಿಗೆ ಜಾಗ ಕೊಡಲಾಗುತ್ತಿತ್ತು. "ಈಗ ನಿಮ್ಮ ರಾಜ್ಯದಲ್ಲಿ ಒಂದು ಬಾರಿ ಹೀಗಾದ ತಕ್ಷಣವೇ ಇಷ್ಟೊಂದು ಕೂಗಾಡುವುದೇಕೆ?" ಎಂದು ಕನ್ನಡಿಗರು ನೆಟ್ಟಿಗರನ್ನು ಪ್ರಶ್ನಿಸುತ್ತಿದ್ದಾರೆ.
ಒಂದು ಕಾಲದಲ್ಲಿ ಬೇರೆ ಭಾಷೆಯ ಸಿನಿಮಾಗಳಿಗಾಗಿ ಕನ್ನಡ ಸಿನಿಮಾಗಳನ್ನೇ ಥಿಯೇಟರ್ನಿಂದ ಹೊರಹಾಕಲಾಗುತ್ತಿತ್ತು, ಆದರೆ ಈಗ ಕಾಲ ಹೇಗೆ ಬದಲಾಗಿದೆ ನೋಡಿ ಎಂದು ಸಿನಿಪ್ರೇಮಿಗಳು ಕಮೆಂಟ್ ಮಾಡುತ್ತಿದ್ದಾರೆ. ತೆಲುಗು ನಟರ ಟೈಯರ್-2 ಮತ್ತು ಟೈಯರ್-3 ಸಿನಿಮಾಗಳಿಗೂ ಕರ್ನಾಟಕದಲ್ಲಿ ಭಾರಿ ಸಂಖ್ಯೆಯ ಚಿತ್ರಮಂದಿರಗಳು ಸಿಗುತ್ತವೆ. ಪ್ರಮುಖ ನಟರ ಬಿಗ್ ಬಜೆಟ್ ಸಿನಿಮಾಗಳು ಬಂದಾಗಲಂತೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳನ್ನೇ ತೆಗೆದು ಹಾಕಿ ಪ್ರದರ್ಶನ ನೀಡಲಾಗುತ್ತಿತ್ತು.
"ನಾವು ವರ್ಷಗಳಿಂದ ಅನುಭವಿಸಿದ ನೋವು ಏನೆಂಬುದು ಈಗ ನಿಮಗೂ ಅರ್ಥವಾಗಿರಬಹುದು. ಇದರಲ್ಲಿ 'ಟಾಕ್ಸಿಕ್' ತಂಡದ ತಪ್ಪೇನೂ ಇಲ್ಲ, ಸಿನಿಮಾ ರಿಲೀಸ್ ದಿನಾಂಕವನ್ನು ಮುಂಚಿತವಾಗಿಯೇ ಘೋಷಿಸಲಾಗಿತ್ತು. ಆದರೂ ನಾವೆಲ್ಲರೂ ಭಾರತೀಯರು, ಈ ರೀತಿಯ ದ್ವಿಮುಖ ನೀತಿಯನ್ನು ಬಿಟ್ಟು ಉತ್ತಮ ಸಿನಿಮಾಗಳನ್ನು ಬೆಂಬಲಿಸೋಣ" ಎಂದು ಹಲವು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ಒಟ್ಟಿನಲ್ಲಿ, 'ಕೆಜಿಎಫ್' ಸರಣಿಯ ಬಳಿಕ ಯಶ್ ಅವರ 'ಟಾಕ್ಸಿಕ್' ಸಿನಿಮಾ ತೆಲುಗು ಮಾರುಕಟ್ಟೆಯಲ್ಲಿ ಯಾವ ಮಟ್ಟದ ಕ್ರೇಜ್ ಸೃಷ್ಟಿಸಿದೆ ಎಂಬುದಕ್ಕೆ ಹೈದರಾಬಾದ್ನ ಈ ಚಿತ್ರಮಂದಿರಗಳ ಬೆಳವಣಿಗೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ.