ಹೈದರಾಬಾದ್ : ರಾಜಮೌಳಿ ಭಾರತೀಯ ಸಿನಿಮಾರಂಗದ ಪ್ರತಿಭಾವಂತ ನಿರ್ದೇಶಕ ಮಾತ್ರವಲ್ಲ, ಅಪ್ರತಿಮ ಮಹಾತ್ವಾಕಾಂಕ್ಷಿ. 'ಬಾಹುಬಲಿ' ಮತ್ತು 'ಆರ್ಆರ್ಆರ್' ಚಿತ್ರಗಳ ಮೂಲಕ ವಿಶ್ವ ಸಿನಿಮಾ ಪ್ರೇಮಿಗಳ ಗಮನ ಸೆಳೆದಿರುವ ಅವರು, ಈಗ ತಮ್ಮ ಮುಂಬರುವ 'ವಾರಣಾಸಿ' ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕಿಂತಲೂ ಮೇಲಕ್ಕೆ ಕೊಂಡೊಯ್ಯುವ ಬೃಹತ್ ಯೋಜನೆ ರೂಪಿಸಿದ್ದಾರೆ. ಈ ಸಿನಿಮಾವನ್ನು ವಿಶ್ವದ ಬರೋಬ್ಬರಿ 50 ಭಾಷೆಗಳಿಗೆ ಡಬ್ ಮಾಡಲು ಸಜ್ಜಾಗಿದ್ದು, ಅದಕ್ಕಾಗಿ ಯಾವುದೇ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸದಿರಲು ದಿಟ್ಟ ನಿರ್ಧಾರ ಮಾಡಿದ್ದಾರೆ.
ತಮ್ಮ ಚಿತ್ರಗಳಿಗಾಗಿ ವಿಶ್ವದ ಅತ್ಯುತ್ತಮ ತಂತ್ರಜ್ಞರು ಹಾಗೂ ಜಾಗತಿಕ ಲೊಕೇಶನ್‌ಗಳನ್ನು ಬಳಸುವ ರಾಜಮೌಳಿ, 'ವಾರಣಾಸಿ'ಯ ಬಹುತೇಕ ಚಿತ್ರೀಕರಣ ಮುಗಿಸಿ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಹಾಲಿವುಡ್‌ನ ಮಾರ್ವೆಲ್ ಹಾಗೂ ಡಿಸಿ ಸ್ಟುಡಿಯೋಗಳ ಮಾದರಿಯಲ್ಲಿ, ಈ ಸಿನಿಮಾವನ್ನು ಒಟ್ಟು 120 ದೇಶಗಳಲ್ಲಿ ಏಕಕಾಲಕ್ಕೆ ಅದ್ಧೂರಿಯಾಗಿ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳು ಡಬ್ಬಿಂಗ್‌ಗಾಗಿ ಎಐ ತಂತ್ರಜ್ಞಾನವನ್ನು ಆಶ್ರಯಿಸುತ್ತಿದ್ದರೂ, ರಾಜಮೌಳಿ ಮಾತ್ರ ಮೂಲ ನಟನೆಯ ಭಾವನೆಗಳನ್ನು ರಕ್ಷಿಸಲು ಪ್ರತಿಯೊಂದು ಭಾಷೆಯಲ್ಲೂ ನೈಜ ಧ್ವನಿ ಕಲಾವಿದರನ್ನೇ ಬಳಸಲಿದ್ದಾರೆ.
ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಪ್ರತಿಯೊಂದು ಭಾಷೆಯಲ್ಲೂ ಪಾತ್ರಗಳ ಧ್ವನಿ ಮತ್ತು ಭಾವನೆಗಳನ್ನು ತಲುಪಿಸುವುದು ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ಆಯಾ ಭಾಷೆಯ ಪರಿಣಿತರನ್ನು ಕರೆಸಿ, ಧ್ವನಿ ಪರೀಕ್ಷೆ ನಡೆಸಿ, ಸಂಭಾಷಣೆಯ ನಿಖರ ತರ್ಜುಮೆಯೊಂದಿಗೆ ಅರ್ಥ ಹಾಗೂ ಭಾವ ವ್ಯತ್ಯಾಸವಾಗದಂತೆ ಡಬ್ಬಿಂಗ್ ಮಾಡಿಸಲು ಮುಂದಾಗಿದ್ದಾರೆ. 'ವಾರಣಾಸಿ'ಯನ್ನು ಮುಂದಿನ ವರ್ಷ ಏಪ್ರಿಲ್ 7ರಂದು ರಿಲೀಸ್ ಮಾಡುವುದಾಗಿ ಪ್ರಕಟಿಸಲಾಗಿದೆಯಾದರೂ, 50 ಭಾಷೆಗಳ ಬೃಹತ್ ಡಬ್ಬಿಂಗ್, ಸಂಗೀತ, ಸ್ಪೆಷಲ್ ಎಫೆಕ್ಟ್ ಹಾಗೂ ವಿಎಫ್‌ಎಕ್ಸ್ ಕೆಲಸಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆಯೇ ಎಂಬುದು ಕುತೂಹಲ ಮೂಡಿಸಿದೆ.