ಬೆಂಗಳೂರು: ‘ವೀರ ಕನ್ನಡಿಗ’, ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಹಾಗೂ 100ಕ್ಕೂ ಹೆಚ್ಚು ಧಾರಾವಾಹಿ-ಟಿವಿ ಶೋಗಳಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಶರ್ಮ, ಇದೀಗ ‘ಭಾವಾಂತರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಹೊಸ ಪೋಸ್ಟರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಯುವತಿಯೊಬ್ಬಳು ಟ್ರಾನ್ಸ್‌ಜೆಂಡರ್ ಪಾತ್ರಕ್ಕೆ ಮುತ್ತಿಕ್ಕುವ ಭಂಗಿಯಲ್ಲಿರುವ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಕಥಾಹಂದರದ ಕುರಿತು ಪ್ರೇಕ್ಷಕರಲ್ಲಿ ತೀವ್ರ ಚರ್ಚೆ ಮತ್ತು ಕುತೂಹಲ ಹುಟ್ಟುಹಾಕಿದೆ. ಈ ಪೋಸ್ಟರ್‌ನಲ್ಲಿ ಹಲವು ಗಹನವಾದ ವಿಷಯಗಳು ಅಡಗಿದ್ದು, ಅದನ್ನು ಪ್ರೇಕ್ಷಕರು ಡಿಕೋಡ್ ಮಾಡಿಕೊಳ್ಳಬಹುದು ಎಂದು ಚಿತ್ರತಂಡ ತಿಳಿಸಿದೆ.
ನೈಜ ಘಟನೆಯನ್ನು ಆಧರಿಸಿ ತಯಾರಾಗಿರುವ ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ಸಂಯೋಜಿಸಿ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಬಗ್ಗೆ ಮಾತನಾಡಿದ ಕಾರ್ತಿಕ್ ಶರ್ಮ, "ದಕ್ಷಿಣ ಭಾರತದಲ್ಲೇ ಈ ರೀತಿಯ ಅಪರೂಪದ ಕಥಾಹಂದರ ಈವರೆಗೂ ಬಂದಿಲ್ಲ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಪ್ರತಿಷ್ಠಿತ 'ಹೊಂಬಾಳೆ ಮ್ಯೂಸಿಕ್' ಸಂಸ್ಥೆ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಪ್ರೇಕ್ಷಕರ ಪ್ರೋತ್ಸಾಹ ಹೀಗೆಯೇ ಮುಂದುವರಿಯಲಿ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಕಾರ್ತಿಕ್ ಶರ್ಮ ಜೊತೆಗೆ ತನ್ವಿ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್ ಹಾಗೂ ಭಾನು ತಾರಾಗಣದಲ್ಲಿದ್ದಾರೆ. ‘ಕಿಕ್ ಮೀಡಿಯಾ’ ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ಸಾಗರ್ ಅದ್ಕರ್ ಛಾಯಾಗ್ರಹಣ ಹಾಗೂ ಆಶೀಷ್ ಹುಲಕುಂದ್ ಸಂಕಲನವಿದೆ. ಈ ಸಿನಿಮಾ ಸದ್ಯದಲ್ಲೇ ರಾಜ್ಯಾದ್ಯಂತ ತೆರೆಕಾಣಲಿದೆ.