ಸಂಭಾಷಣೆ, ಮುಖಭಾವ, ಹಾಸ್ಯ ಮತ್ತು ನಗುವಿನ ಶೈಲಿಯಿಂದಲೇ ಮನೆ ಮಾತಾಗಿರುವ ಉಮೇಶ್ ತಮ್ಮ ಹದಿನಾಲ್ಕನೇ ವಯಸ್ಸಿಗೆ ಅಂದರೆ 1960ರಲ್ಲಿ “ಮಕ್ಕಳ ರಾಜ್ಯ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮೈಸೂರು ಶ್ರೀಕಂಠಯ್ಯ ಉಮೇಶ್ ಆಗಿರುವ ಎಮ್.ಎಸ್ ಉಮೇಶ್ ಅವರು ಆರು ದಶಕಗಳ ಕಾಲ ಕನ್ನಡ ಚಿತ್ರರಂಗದ ವೃತ್ತಿಜೀವನವನ್ನು ಹೊಂದಿರುವ ಒಬ್ಬ ಭಾರತೀಯ ನಟರಾಗಿದ್ದಾರೆ. ಅವರ ಬಾಲ್ಯದಲ್ಲಿ ರಂಗಭೂಮಿ ನಟರಾಗಿ ಹಲವಾರು ವೇದಿಕೆಗಳಲ್ಲಿ ಕಾಣಿಸಿಕೊಂಡ ನಂತರ ಅವರನ್ನು ‘ಮಕ್ಕಳ ರಾಜ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರದ ಮೂಲಕ ಚಿತ್ರರಂಗಕ್ಕೆ ಆಯ್ಕೆ ಮಾಡಲಾಯಿತು. “ಮಕ್ಕಳ ರಾಜ್ಯ” ಚಿತ್ರದ ಸಹ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲರು ಚಂದ್ರಹಾಸ ನಾಟಕದಲ್ಲಿ ಚಂದ್ರಹಾಸನ ಪಾತ್ರವನ್ನು ಮಾಡುತ್ತಿದ್ದ ಉಮೇಶ್ ಅಭಿನಯವನ್ನು ನೋಡಿ ಉಮೇಶ್ ಅವರನ್ನು ನಿರ್ದೇಶಕ ಬಿ.ಆರ್ ಪಂತುಲು ಅವರಿಗೆ ಪರಿಚಯಿಸಿದರು.
ಉಮೇಶ್ ಅವರು ತಿಪಟೂರಿನಲ್ಲಿದ್ದಾಗ ರಂಗಭೂಮಿ ಯಲ್ಲಿದ್ದ ಸಂದರ್ಭದಲ್ಲಿ ಅವರ ಸಂಭಾವನೆ ಹತ್ತು ರೂಪಾಯಿ. ತುಂಬಾ ಬಡತನದಲ್ಲಿದ್ದ ಉಮೇಶ್ ಅವರಿಗೆ ಹೊಸ ಬಟ್ಟೆ, ಕಾಲಿಗೆ ಚಪ್ಪಲಿ ಕೊಡಿಸಿ ಮದ್ರಾಸಿಗೆ ಕರೆದುಕೊಂಡು ಹೋಗಿ ಚಿತ್ರದಲ್ಲಿ ಪಾತ್ರ ಮಾಡುವಂತೆ ಮಾಡಿದ ಪುಟ್ಟಣ್ಣ ಕಣಗಾಲರನ್ನು ಉಮೇಶ್ ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಬಿ.ಆರ್ ಪಂತುಲ್ ಅವರಿಗೆ ಉಮೇಶ್ ಅವರನ್ನು ಪರಿಚಯಿಸಿದಾಗ ಉಮೇಶ್ ತುಂಬಾ ಸಣ್ಣವಿದ್ದ ಕಾರಣ ಅವರನ್ನು ದಪ್ಪ ಮಾಡುವ ಸಲುವಾಗಿ ಒಂದು ತಿಂಗಳು ಉಮೇಶ್ ಅವರಿಗೆ ಸರಿಯಾಗಿ ತಿನ್ನಿಸಿದರಂತೆ. ನಾಟಕ ಕಂಪನಿಯಲ್ಲಿದ್ದವರ ಕಷ್ಟ ಪಂತುಲು ಅವರಿಗೆ ಗೊತ್ತಿದ್ದ ಕಾರಣ ಅವರು ಉಮೇಶ್ ಅವರಿಗೆ ತುಂಬಾ ಸಹಕಾರ ನೀಡಿದರಂತೆ.
ಉಮೇಶ್ ಬಿಟ್ಟಿದ್ದ ಉದ್ದುದ್ದ ಕೂದಲನ್ನು ಕಟ್ ಮಾಡಿಸಿ ಹುಡುಗನಿಗೆ ಹೊಸ ರೂಪ ಕೊಟ್ಟವರು ಪಂತುಲು. ಉಮೇಶ್ ಚಿತ್ರರಂಗ ಪ್ರವೇಶಿಸಿದಾಗ ಮೊದಲ ಸ್ಕ್ರೀನ್ ಟೆಸ್ಟ್ ಮಾಡಿದವರು. ಆಗಿನ ಹೆಸರಾಂತ ಛಾಯಾಗ್ರಾಹಕ ಸುಬ್ಬರಾವ್. ಉಮೇಶ್ ಅವರು ಆಗ ಎಳೇ ವಯಸ್ಸಿನ ಹುಡುಗನಾದ್ದರಿಂದ ಮತ್ತು ಮೊದಲಿಗೆ ಸ್ಕ್ರೀನ್ ಟೆಸ್ಟ್ ಸಂದರ್ಭದಲ್ಲಿ ಭಯಗೊಂಡ ಉಮೇಶ್ ಅವರನ್ನು ಧೈರ್ಯತುಂಬಿಸಿ ಅಭಿನಯಿಸುವಂತೆ ಮಾಡಿದವರಂತೆ. ಆನಂತರ ಉಮೇಶ್ ಅವರ ಮೊದಲ ಚಿತ್ರದ ಮೊದಲ ದೃಶ್ಯದ ಚಿತ್ರಿಕೆಯನ್ನು ಎಡಿಟ್ ಮಾಡಿಸಿ ಸ್ಕ್ರೀನ್‌ನಲ್ಲಿ ನೋಡಿದಾಗ ಉಮೇಶ್ ಅವರಗೆ ಆದ ಆನಂದ ಸಂಭ್ರಮ ಅಷ್ಟಿಷ್ಟಲ್ಲ. ಮತ್ತೆ ಪುಟ್ಟಣ್ಣ ಕಣಗಾಲರು ಉಮೇಶ್ ಅವರಿಗೆ ಕಥಾಸಂಗಮದಲ್ಲಿ ಅವಕಾಶಕೊಟ್ಟರು. ಪುಟ್ಟಣ್ಣ ಕಣಗಾಲರ ಸಂಪರ್ಕ ಎಲ್ಲವೂ ಮರೆಯಲಾಗದ ನೆನೆಪುಗಳು ಎನ್ನುವ ಉಮೇಶ್ ಅವರು ಆನಂತರ ಅಭಿನಯಿಸಿದ್ದು ‘ಹಾವಿನ ಹೆಡೆ’ ಚಿತ್ರದಲ್ಲಿ. ಡಾ. ರಾಜ್‌ಕುಮಾರ್ ಅವರ ಜೊತೆ ಉಮೇಶ್ ಅವರದ್ದು ಒಂದು ಕಳ್ಳನ ಪಾತ್ರವಾಗಿದ್ದರೂ ಕೂಡ ಅಣ್ಣಾವ್ರೊಂದಿಗೆ ಉಮೇಶ್ ಅವರು ಅಭಿನಯಿಸಿದ ಮೊದಲ ಚಿತ್ರ. ಡಾ. ರಾಜ್ ಕುಮಾರ್ ಅವರೊಂದಿಗೆ ಉಮೇಶ್ ಅವರು ಮತ್ತೆ ಅಭಿನಯಿಸಿದ್ದು ‘ಶೃತಿ ಸೇರಿದಾಗ’ ಚಿತ್ರದಲ್ಲಿ.
ಆ ಚಿತ್ರದಲ್ಲಿ ಬೊಂಬೆಯಾಟವಯ್ಯ ಎಂಬ ಹಾಡಿನಲ್ಲಿ ಪ್ರೇಕ್ಷಕರಿಗೆ ಕಚಗುಳಿ ಇಡುವ ಎಡಬಿಡಂಗಿ ಪಾತ್ರ ಉಮೇಶ್ ಅವರದ್ದು. ಒಂದೊಂದು ಸಾರಿ ಎಂಥಾ ಕಲಾವಿದನಾದರೂ ಇಕ್ಕಟ್ಟಿಗೆ ಸಿಲುಕುತ್ತಾರೆ ಅನ್ನೋದಕ್ಕೆ ಉಮೇಶ್ ಅವರು ಕೂಡ ಸಾಕ್ಷಿಯಾಗಿದ್ದರಂತೆ. ಉಮೇಶ್ ಅವರ ‘ಕಥಾ ಸಂಗಮ’ ಚಿತ್ರ ಯಶಸ್ವಿಯಾಗುತ್ತಿದ್ದಂತೆ ಇನ್ನೊಂದು ಚಿತ್ರಕ್ಕೆ ಅವಕಾಶ ಸಿಕ್ಕಿ, ಅದರ ಚಿತ್ರೀಕರಣಕ್ಕೆ ಚಿಕ್ಕ ಮಗಳೂರಿಗೆ ಹೋದಾಗ ಅಲ್ಲಿ ಚಿತ್ರತಂಡದವರ ಕೈಯ್ಯಲ್ಲಿ ದುಡ್ಡು ಇರಲಿಲ್ಲ. ಫಿಲಮ್ ಸ್ಟಾಕ್ ಇರಲಿಲ್ಲ. ಅಷ್ಟು ಮಾತ್ರವಲ್ಲದೆ ಊಟ ಕೂಡ ಸಿಗ್ಲಿಲ್ಲ ಎಂದು ಅಂದಿನ ಘಟನೆಯನ್ನು ನೆನಪಿಸುತ್ತಾರೆ. ಉಮೇಶ್ ಅವರು ಎ.ಎಲ್. ಶ್ರೀಕಂಠಯ್ಯ ಮತ್ತು ನಂಜಮ್ಮ ದಂಪತಿಗಳ ಪುತ್ರರಾಗಿ 1945ರ ಏಪ್ರಿಲ್ 24ರಂದು ಜನಿಸಿದರು. ಅವರ 4ನೇ ವಯಸ್ಸಿನಲ್ಲಿ ಕೆ. ಹಿರಣ್ಣಯ್ಯನವರು ನಡೆಸುತ್ತಿದ್ದ ಜನಪ್ರಿಯ ನಾಟಕ ತಂಡಕ್ಕೆ ಸೇರಿದರು. ಶೀಘ್ರದಲ್ಲೇ ಅವರು ಹೆಚ್ಚು ಪ್ರಸಿದ್ಧವಾದ ಗುಬ್ಬಿ ವೀರಣ್ಣನವರ ಕಂಪನಿಗೆ ಸೇರಿಕೊಂಡರು ಮತ್ತು ಬಾಲ ಕಲಾವಿದರಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಪುಟ್ಟಣ್ಣ ಕಣಗಾಲ್ ಅವರ ‘ಕಥಾ ಸಂಗಮ’ಚಿತ್ರದ ಕಥಾ ಸಂಕಲನದಲ್ಲಿ ನಟಿಸಿದರು.
ಗಂಗಾಧರ್, ರಜನಿಕಾಂತ್ ಮತ್ತು ಆರತಿ ಒಳಗೊಂಡ ಮುನಿತಾಯಿ ಸಂಚಿಕೆಯಲ್ಲಿ ಅವರ “ತಿಮ್ಮರಾಯಿ” ಪಾತ್ರವು ಅವರಿಗೆ ಅತ್ಯುತ್ತಮ ಪೋಷಕ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿತು. ‘ಗೋಲ್‌ಮಾಲ್ ರಾಧಾಕೃಷ್ಣ’ ಚಿತ್ರದ ಅವರ ಪಾತ್ರ. ಅಯ್ಯಯ್ಯೋ ಬೇಜಾರ್ ಮಾಡ್ಕೊಂಡ್ರಾ, ನಾನು ಬೇಕೂಂತ ನಿಮ್ಮ ಹೆಂಡ್ತೀನ ತಬ್ಕೊಳ್ಳಿಲ್ಲಾ ಸರ್,ಈ ಸನ್ನಿವೇಶವಂತು ಇಂದಿಗೂ ಕಲಾಪ್ರೇಮಿಗಳು ಮರೆಯಲಿಲ್ಲ. 1978ರಲ್ಲಿ
ನಾಗರಹೊಳೆ, 1981ರಲ್ಲಿ ಗುರು ಶಿಷ್ಯರು, ಅನುಪಮಾ 1983ರಲ್ಲಿ ಕಾಮನ ಬಿಲ್ಲು,1984ರಲ್ಲಿ ಅಪೂರ್ವ ಸಂಗಮ, ಶ್ರಾವಣ ಬಂತು, 1986ರಲ್ಲಿ ಗೋಲ್ಮಾಲ್ ರಾಧಾಕೃಷ್ಣ,1987ರಲ್ಲಿ ಶ್ರುತಿ ಸೇರಿದಾಗ, 1990ರಲ್ಲಿ ಮಲಯ ಮಾರುತ, 1993ರಲ್ಲಿ ನೀನು ನಕ್ಕರೆ ಹಾಲು ಸಕ್ಕರೆ ಮುಂತಾದ ಚಿತ್ರಗಳು ಉಮೇಶ್ ಅವರಿಗೆ ಮರುಜೀವ ತಂದುಕೊಟ್ಟ ಚಿತ್ರಗಳು. ಅದೇ ಶೈಲಿಯಲ್ಲಿ ಇಂದಿಗೂ ಅಭಿನಯಿಸುತ್ತಿದ್ದಾರೆ.
ಹಾಸ್ಯಪ್ರಜ್ಞೆಯಿಂದ ಕಲಾಪ್ರೇಕ್ಷಕರನ್ನು ನಗಿಸಿ, ಕಚಗುಳಿ ಇಟ್ಟಂತೆ ಮಾಡಿರುವ ರಂಗಭೂಮಿ ಮತ್ತು ಚಿತ್ರರಂಗದ ಮಹಾನ್ ಕಲಾವಿದರಾದ ಎಂ.ಎಸ್ ಉಮೇಶ್ ಸಿನಿಲೋಕದ ಧ್ರುವತಾರೆಯಾಗಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್