image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿನಿ ಲೋಕದ ದ್ರುವತಾರೆ ಗಾನಕೋಗಿಲೆ ಎಸ್. ಜಾನಕಿ

ಸಿನಿ ಲೋಕದ ದ್ರುವತಾರೆ ಗಾನಕೋಗಿಲೆ ಎಸ್. ಜಾನಕಿ

ಭಾರತೀಯ ಚಲನಚಿತ್ರ ರಂಗದ ಇತಿಹಾಸದಲ್ಲಿ ‘ಗಾನ ಕೋಕಿಲೆ’, ‘ಗಾನ ಗಂಧರ್ವಿ’ ಎಂದೇ ಪ್ರಖ್ಯಾತರಾದ ಎಸ್. ಜಾನಕಿ (ಶಿಷ್ಟಾ ಜಾನಕಿ) ಅವರು ತಮ್ಮ ವೈವಿಧ್ಯಮಯ ಕಂಠಸಿರಿ ಮತ್ತು ನೈಜ ಭಾವಾಭಿನಯದಿಂದ 6 ದಶಕಗಳಿಗೂ ಹೆಚ್ಚು ಕಾಲ ಕೋಟ್ಯಾಂತರ ಸಂಗೀತ ಪ್ರೇಮಿಗಳ ಹೃದಯಗಳನ್ನು ಆಳಿದ ಶ್ರೇಷ್ಠ ಗಾಯಕಿ. ನಾದಪ್ರಪಂಚಕ್ಕೆ ತಮ್ಮದೇ ಆದ ಶ್ರೇಷ್ಠ ಕೊಡುಗೆ ನೀಡಿದ ಜಾನಕಿಯವರ ಧ್ವನಿ ಭಾರತೀಯ ಚಿತ್ರಸಂಗೀತದ ಸುವರ್ಣ ಯುಗದ ಪ್ರಮುಖ ಸಂಕೇತ. ಎಸ್. ಜಾನಕಿ ಯವರು ಏಪ್ರಿಲ್ 23, 1938ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ‘ರೆಪಲ್ಲೆ’ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಿಷ್ಟಾ ಶ್ರೀರಾಮಮೂರ್ತಿ ಮತ್ತು ತಾಯಿ ಸತ್ಯವತಿ. ಬಾಲ್ಯದಿಂದಲೇ ಜಾನಕಿಯವರಿಗೆ ಸಂಗೀತದಲ್ಲಿ ನೈಸರ್ಗಿಕ ಆಸಕ್ತಿಯಿತ್ತು. ವಿಶೇಷ ವೆಂದರೆ, ಇವರು ಯಾವುದೇ ಶಾಸ್ತ್ರೀಯ ಸಂಗೀತದ ಕಠಿಣ ಔಪಚಾರಿಕ ತರಬೇತಿಯನ್ನು ಸುದೀರ್ಘವಾಗಿ ಪಡೆಯಲಿಲ್ಲ. ತಮ್ಮ ಚಿಕ್ಕಪ್ಪ ಪೈಡಿ ಸ್ವಾಮಿ ಅವರಿಂದ ಸಂಗೀತದ ಮೂಲ ಪಾಠಗಳನ್ನು ಕಲಿತ ನಂತರ, ಕೇವಲ ಸ್ವಂತ ಪರಿಶ್ರಮ, ಏಕಾಗ್ರತೆ ಹಾಗೂ ನೈಸರ್ಗಿಕ ಪ್ರತಿಭೆಯ ಆಧಾರದ ಮೇಲೆ ಸಂಗೀತ ಲೋಕಕ್ಕೆ ಕಾಲಿಟ್ಟರು. ಅವರ ಅದ್ಭುತ ಧ್ವನಿ ಮತ್ತು ಗಾಯನ ಶೈಲಿಯನ್ನು ಗುರುತಿಸಿದ ನಾಟಕಕಾರ ಪೈಡಿ ಸ್ವಾಮಿ ಅವರು ಜಾನಕಿ ಯವರನ್ನು ಚೆನ್ನೈನ ಜೆಮಿನಿ ಸ್ಟುಡಿಯೋಸ್‌ಗೆ ತಲುಪಲು ಪ್ರೇರೇಪಿಸಿದರು.

1957ರಲ್ಲಿ ಜೆಮಿನಿ ಸ್ಟುಡಿಯೋಸ್ ಸೇರಿದ ಜಾನಕಿ ಯವರಿಗೆ ತೆಲುಗಿನ ‘ಎಮ್.ಎಲ್.ಎ’ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಪ್ರಥಮ ಅವಕಾಶ ದೊರೆಯಿತು. 1957ರಲ್ಲೇ ಬಿಡುಗಡೆ ಯಾದ ‘ರಾಯರ ಸೊಸೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ಜಾನಕಿ ಯವರು, ತದನಂತರ ಕನ್ನಡಿಗರ ನೆಚ್ಚಿನ ಗಾಯಕಿಯಾಗಿ ಹೊರಹೊಮ್ಮಿದರು. ಕನ್ನಡ ನಾಡು, ನುಡಿ ಮತ್ತು ಕನ್ನಡಿಗರ ಮೇಲೆ ಜಾನಕಮ್ಮನವರಿಗೆ ಅಪಾರ ಪ್ರೀತಿ. ಕನ್ನಡದ ಘಟಾನುಘಟಿ ಗಾಯಕರು ಮತ್ತು ಸಂಗೀತ ನಿರ್ದೇಶಕರೊಂದಿಗೆ ಇವರ ಜೋಡಿ ಅದ್ಭುತ ಹಿಟ್‌ಗಳನ್ನು ನೀಡಿದೆ. ಜಾನಕಿಯವರು ಡಾ. ರಾಜ್ ಜೊತೆ ಗಾಯನದಲ್ಲಿ ಮೂಡಿಸಿದ ಮೋಡಿ ಸಾರ್ವಕಾಲಿಕ ಯಶಸ್ಸು ಕಂಡಿತು.

ಪಿಬಿಎಸ್ ಮತ್ತು ಎಸ್‌ಪಿಬಿ ಅವರೊಂದಿಗೆ ಜಾನಕಿಯವರು ಹಾಡಿದ ಯುಗಳ ಗೀತೆಗಳು ಪ್ರತಿಯೊಬ್ಬ ಕನ್ನಡಿಗನ ದಿನಚರಿಯ ಭಾಗ ವಾದವು. ರಾಜನ್-ನಾಗೇಂದ್ರ ಅವರ ಮಧುರ ಸಂಯೋಜನೆಗಳಿಗೆ ಜಾನಕಿಯವರ ಜೀವ ತಂಬಿದ ಗಾಯನ ಮೆರುಗು ನೀಡಿದರೆ, ಹಂಸಲೇಖ ಅವರ ಹಸನ್ಮುಖಿ ಸಾಹಿತ್ಯಕ್ಕೆ ಜಾನಕಿಯವರ ನಾದಸ್ಪರ್ಶ ಹೊಸ ಇತಿಹಾಸ ವನ್ನೇ ಸೃಷ್ಟಿಸಿತು. ‘ಯುಗ ಯುಗಗಳೇ ಸಾಗಲಿ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’, ‘ಇಂದೆನಗಾನಂದವಾಯಿತು’, ‘ಪೂರ್ಣ ಚಂದ್ರಿಕಾ’, ‘ನನ್ನಾಸೆಯ ಹೂವೇ’, ‘ಶೃಂಗಾರಕಾವ್ಯ’ ಮುಂತಾದ ಸಾವಿರಾರು ಹಾಡುಗಳು ಇಂದಿಗೂ ಪ್ರತಿಯೊಂದು ಮನೆ ಯಲ್ಲೂ ಕೇಳಿಬರುತ್ತವೆ. ಎಸ್. ಜಾನಕಿಯವರ ಗಾಯನದ ಅತಿ ದೊಡ್ಡ ಶಕ್ತಿಯೆಂದರೆ ವೈವಿಧ್ಯತೆ. ಯಾವುದೇ ತಾಂತ್ರಿಕ ಸಹಾಯ ವಿಲ್ಲದೆ ತಮ್ಮ ಕಂಠವನ್ನು ಅತ್ಯಂತ ಸುಲಭವಾಗಿ ಬದಲಾಯಿಸುವ ಕೌಶಲ ಅವರಿಗೆ ಸಿದ್ಧಿಸಿತ್ತು. ಪುಟಾಣಿ ಮಕ್ಕಳ ಪಾತ್ರಕ್ಕೆ ಅವರೇ ಹಾಡುತ್ತಿದ್ದ ರೀತಿಯನ್ನು ಕೇಳಿದರೆ ನಿಜವಾದ ಮಗುವೇ ಹಾಡುತ್ತಿದೆಯೇನೋ ಎಂಬ ಭ್ರಮೆ ಉಂಟಾಗುತ್ತಿತ್ತು. ವಯಸ್ಸಾದ ಮುದುಕಿ, ಗ್ರಾಮೀಣ ಸೊಗಡಿನ ಹೆಣ್ಣುಮಗಳು, ಶೃಂಗಾರ ನಾಯಕಿ ಹೀಗೆ ಪ್ರತಿಯೊಂದು ಪಾತ್ರಕ್ಕೂ ಸೂಕ್ತ ವಾಗುವಂತೆ ಧ್ವನಿಯ ಭಾವನೆಗಳನ್ನು ಹೊಂದಿ ಸುತ್ತಿದ್ದರು.

ಜಾನಕಿ ಅವರು ಚಲನಚಿತ್ರಗಳು, ಆಲ್ಬಮ್‌ಗಳು, ದೂರದರ್ಶನ ಮತ್ತು ರೇಡಿ ಯೋಗಳಿಗಾಗಿ 48,000ಕ್ಕೂ ಹೆಚ್ಚು ಹಾಡು ಗಳನ್ನು ಹಾಡಿದ್ದಾರೆ. ಇವುಗಳಲ್ಲಿ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳು ಹಾಗೂ ಕೆಲವು ವಿದೇಶಿ ಭಾಷೆಗಳಲ್ಲಿನ ಏಕಗಾಯನ, ಯುಗಳ ಗೀತೆಗಳು, ಸಮೂಹ ಗಾಯನ ಮತ್ತು ಶೀರ್ಷಿಕೆ ಗೀತೆಗಳು ಸೇರಿವೆ. ಇವುಗಳಲ್ಲಿ ಅತಿ ಹೆಚ್ಚು ಹಾಡುಗಳು ಕನ್ನಡ ಭಾಷೆಯಲ್ಲಿವೆ. ಅವರು ಭಾರತದ ಅತ್ಯಂತ ಬಹುಮುಖಿ ಪ್ರತಿಭೆಯ ಗಾಯಕಿಯರಲ್ಲಿ ಒಬ್ಬರಾಗಿದ್ದರು. ಜಾನಕಿ ತಮ್ಮ 19ನೇ ವಯಸ್ಸಿನಲ್ಲಿ ‘ವಿಧಿಯಿನ್ ವಿಲಯಟ್ಟು’ (1957) ಎಂಬ ತಮಿಳು ಚಿತ್ರದ ಮೂಲಕ ತಮ್ಮ ಗಾಯನ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅದೇ ವರ್ಷದಲ್ಲಿ ಆರು ವಿಭಿನ್ನ ಭಾಷೆಗಳಲ್ಲಿ ಹಾಡುಗಳನ್ನು ಧ್ವನಿಮುದ್ರಿಸಿದರು. ಅವರ ವೃತ್ತಿಜೀವನವು ಆರು ದಶಕಗಳಿಗೂ ಹೆಚ್ಚು ಕಾಲ (2016 ರವರೆಗೆ) ಮುಂದುವರಿಯಿತು. ಆ ವರ್ಷದಲ್ಲಿ ಅವರು ಚಲನಚಿತ್ರ ಗಾಯನ ಮತ್ತು ವೇದಿಕೆ ಪ್ರದರ್ಶನಗಳಿಂದ ನಿವೃತ್ತರಾಗುವುದಾಗಿ ಘೋಷಿಸಿದರು.

ಆದಾಗ್ಯೂ, 2018ರಲ್ಲಿ ‘ಪನ್ನಾಡಿ’ ಎಂಬ ತಮಿಳು ಚಿತ್ರಕ್ಕಾಗಿ ಹಾಡುವ ಮೂಲಕ ಅವರು ಮತ್ತೆ ಹಿಂತಿರುಗಿದರು. ಅವರು ಸುಮಾರು 60 ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.  ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳನ್ನು ಗೆದ್ದಿದ್ದಾರೆ.  ಮೈಸೂರು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್, ತಮಿಳುನಾಡು ಸರ್ಕಾರದಿಂದ ‘ಕಲೈಮಾ ಮಣಿ’ ಪ್ರಶಸ್ತಿ ಮತ್ತು ಕರ್ನಾಟಕ ಸರ್ಕಾರ ದಿಂದ ‘ರಾಜ್ಯೋತ್ಸವ ಪ್ರಶಸ್ತಿ’ಗಳನ್ನು ಪಡೆದಿದ್ದಾರೆ. ತಮ್ಮ ವೃತ್ತಿಜೀವನದ ಸಾಧನೆಗಾಗಿ 2013ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮ ಭೂಷಣ’ವನ್ನು ಬಹಳ ತಡವಾಗಿ ಬಂದಿದೆ ಎಂದು ನಿರಾಕರಿಸಿದ್ದರು.

ಅಲ್ಲದೆ, ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಕಲಾವಿದರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಮನ್ನಣೆ ಸಿಗದಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.  1959ರಲ್ಲಿ ವಿ. ರಾಮ್‌ಪ್ರಸಾದ್ ಅವ ರನ್ನು ವಿವಾಹವಾದರು.  ಜಾನಕಿ ಅವರ ವೃತ್ತಿಜೀವನಕ್ಕೆ ಪ್ರೋತ್ಸಾಹ ನೀಡಿದರೂ 1997ರಲ್ಲಿ ಹೃದಯ ಸ್ತಂಭನದಿಂದ ಅವರು ನಿಧನರಾದರು. ಜಾನಕಿ ಅವರು ವಯೋ ಸಹಜ ಅನಾರೋಗ್ಯದ ಕಾರಣದಿಂದಾಗಿ 2026ರ ಜುಲೈ 11ರಂದು ಮೈಸೂರಿನಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಇಂತಹ ಮಹಾನ್ ಗಾಯಕಿ ಎಸ್ ಜಾನಕಿ ಯವರು ನಮ್ಮ ಕರಾವಳಿ ತರಂಗಿಣಿ ನಮಿಸುತ್ತಿದೆ.

✍ ಎನ್ನಾರ್ ಕೆ ವಿಶ್ವನಾಥ್

Category
ಕರಾವಳಿ ತರಂಗಿಣಿ