ಚಾಮಯ್ಯ ಮೇಷ್ಟ್ರು ಅಂದಾಕ್ಷಣ ಎಲ್ಲರಿಗೂ ನೆನಪಾಗುವುದು ವಿಷ್ಣುವರ್ಧನ್ ಅಭಿನಯದ “ನಾಗರಹಾವು” ಚಿತ್ರ. ಈ ಚಿತ್ರದಲ್ಲಿನ ಚಾಮಯ್ಯ ಮೇಷ್ಟ್ರ ಪಾತ್ರವನ್ನು ಮಾಡಿದ ಕೆ ಎಸ್ ಅಶ್ವಥ್‌ರವರು, ಇಂದಿಗೂ ಕಲಾರಸಿಕರ ಮನಸ್ಸಿನಲ್ಲಿ ಚಾಮಯ್ಯ ಮೇಸ್ಟ್ರಾಗಿಯೇ ಉಳಿದಿದ್ದಾರೆ. ಅಶ್ವಥ್‌ರವರ ಅಭಿನಯ ಎಷ್ಟರಮಟ್ಟಿಗೆ ಇತ್ತೆಂಬುದು ಇದರಿಂದ ತಿಳಿಯುತ್ತದೆ. 1925 ರಲ್ಲಿ ಈಗಿನ ಹಾಸನ ಜಿಲ್ಲೆಯ ಹೊಳೆನರಸೀಪುರದ ಕರಗನಹಳ್ಳಿಯಲ್ಲಿ ಜನಿಸಿದ ಕರಗನಹಳ್ಳಿ ಸುಬ್ಬರಾಯ ಅಶ್ವಥನಾರಾಯಣರವರು, ಮೈಸೂರು ಆಕಾಶವಾಣಿ ನಡೆಸಿಕೊಡುತ್ತಿದ್ದ ರೇಡಿಯೋ ನಾಟಕಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು.
ಸಾಕಷ್ಟು ಪ್ರಸಾರಣ ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡೆದುಕೊಂಡರು. ನಂತರ ರಂಗಭೂಮಿಗೆ ಪ್ರವೇಶಗೊಂಡ ಕೆ ಎಸ್ ಅಶ್ವಥ್ ರವರು ಎ. ಎನ್. ಮೂರ್ತಿ ರಾವ್, ಪರ್ವತವಾಣಿ ಮತ್ತು ಇನ್ನಿತರರ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದರು. ನಾಟಕಗಳಲ್ಲಿ ಅಶ್ವಥ್‌ರವರ ಅಭಿನಯವನ್ನು ನೋಡಿದ ಚಲನಚಿತ್ರ ನಿರ್ದೇಶಕ ಕೆ. ಸುಬ್ರಹ್ಮಣ್ಯಂ, ಅಶ್ವಥ್ ಅವರನ್ನು “ಸ್ತ್ರೀರತ್ನ” ಚಿತ್ರದಲ್ಲಿ ಪಾತ್ರವೊಂದಕ್ಕೆ ಆಯ್ಕೆ ಮಾಡಿದರು.
ಅಲ್ಲಿಂದ ಸಿನಿಮಾರಂಗದಲ್ಲಿ ಪ್ರಯಾಣ ಶುರು ಮಾಡಿದ ಅಶ್ವಥ್‌ರವರು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ “ಸಿರಿವಂತ” ಚಿತ್ರದವರೆಗೆ, 5 ದಶಕದಲ್ಲಿ ಸುಮಾರು 370 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿಯೂ ಡಾ ರಾಜ್ ಕುಮಾರ್ ಜೊತೆ ತೊಂಬತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ನಾರದನಾಗಿ ಅಭಿನಯಿಸಿದ್ದಾರೆ. ಕನ್ನಡದ ನಟರನೇಕರಿಗೆ ಸಿನಿಮಾದಲ್ಲಿ ತಂದೆಯಾಗಿದ್ದಾರೆ.
ಹೀಗೆ ವಿಧವಿಧವಾದ ಪಾತ್ರಗಳಲ್ಲಿ ತನ್ನ ಅಭಿನಯದ ಸಾಮರ್ಥ್ಯವನ್ನು ತೋರಿಸಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾಗ ಅಶ್ವಥ್‌ರವರು ಚಿತ್ರೀಕರಣಕ್ಕೆ ಬಂದಾಗ, ತನ್ನ ಪಾತ್ರಕ್ಕೆ ಸಂಬಂಧಪಟ್ಟ ಸಂಭಾಷಣೆಯ ಪೇಪರ್ ಕೈಗೆ ಬಂದ ಮೇಲೆ ಯಾರೊಬ್ಬರಲ್ಲೂ ಹರಟೆ ಹೊಡೆಯದೆ, ಅನಾವಶ್ಯಕವಾಗಿ ಸಮಯ ಕಳೆಯದೆ, ಪಾತ್ರದ ಬಗ್ಗೆ ಮತ್ತು ಸಂಭಾಷಣೆಯ ಬಗ್ಗೆ ಸ್ಟಡಿ ಮಾಡುತ್ತಾ ಕುಳಿತಿರುತ್ತಿದ್ದರು. ತಾನು ಮಾಡುವ ಪಾತ್ರ ಮೊದಲು ತನಗೆ ಸರಿ ಬರುವವರೇಗೂ ಬಿಡದೆ ಅಭಿನಯಿಸುತ್ತಿದ್ದರು. ಅಭಿನಯದಲ್ಲೀನ ಅವರ ಭಕ್ತಿ, ಶ್ರದ್ಧೆ ಅವರನ್ನು ಕಲಾರಾಧಕನಾಗಿ ಅತೀ ಎತ್ತರಕ್ಕೆ ಬೆಳೆಯುವಂತೆ ಮಾಡಿತು ಎಂದರೆ ತಪ್ಪಾಗಲಾರದು.
ಅಣ್ಣಾವ್ರ ಬಗ್ಗೆ ಅತೀ ಗೌರವವನ್ನು ಇಟ್ಟುಕೊಂಡಿದ್ದ ಅಶ್ವಥ್‌ರವರು, ಅಣ್ಣಾವ್ರ ಆತ್ಮೀಯ ನಟರಲ್ಲೊಬ್ಬರಾಗಿದ್ದರು. ಕನ್ನಡ ಭಾಷೆಯ ಅಪ್ಪಟ ಕಲಾವಿದನೊಬ್ಬ ಇಂಗ್ಲೀಷ್ ಭಾಷೆಯಲ್ಲಿ ಅಭಿನಯಿಸಿದ ಮೊದಲ ಕಲಾವಿದ ಕೆ ಎಸ್ ಅಶ್ವಥ್. ಇವರು ಅಭಿನಯಿಸಿದ ಚಿತ್ರದ ಹೆಸರು “ಸೆವೆನ್ ವಂಡರ್ಸ್ ಆಫ್ ದಿ ವರ್ಲ್ಡ್”. 1994 ರಲ್ಲಿ ಚಿತ್ರರಂಗದಿಂದ ದೂರ ಸರಿದ ಅಶ್ವಥ್‌ರವರು “ಶಬ್ದವೇಧಿ” ಚಿತ್ರದಲ್ಲಿ ಪಾತ್ರ ಮಾಡಲು ಒತ್ತಾಯ ಬಂದ ಕಾರಣ ಮತ್ತೆ ಬಣ್ಣ ಹಚ್ಚಿದರು. ಇವರಿಗೆ ತುಮಕೂರು ಯೂನಿವರ್ಸಿಟಿಯಿಂದ ಡಾಕ್ಟರೇಟ್ ಲಭಿಸಿದೆ.ತನ್ನ ಜೀವಮಾನದ ಸಾಧನೆಗಾಗಿ ಕರ್ನಾಟಕ ಸರಕಾರದಿಂದ ಡಾ. ರಾಜ್ ಕುಮಾರ್ ಪ್ರಶಸ್ತಿ ಪಡೆದರು. ಇವರು ಕಲಾವಿದನಾಗುವ ಮೊದಲು ಸುಮಾರು ಹತ್ತು ವರ್ಷಗಳ ಕಾಲ ಸರಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅಶ್ವಥ್ ರವರು ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬ್ಯಾಚೂಲರ್ ಆಫ್ ಕಾಮರ್ಸ್ ಮಾಡಿ ಏಳನೇ ರ‍್ಯಾಂಕ್‌ಗೆ ಭಾಜನರಾಗಿದ್ದರು.
ಆ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಸ್ವಾತಂತ್ರ್ಯ ಸಿಗುವ ಮುಂಚೆನೆ ಅಂದರೆ 1944 ರಲ್ಲಿ ಅಶ್ವಥ್‌ರವರಿಗೆ ಫುಡ್ ಇನ್ಸ್ಪೆಕ್ಟಾರಾಗಿ ಕೆಲಸ ಸಿಗುತ್ತದೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಸ್ಟೆನೋಗ್ರಾಫರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕೊನೆಕಾಲದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಎಸ್. ಅಶ್ವಥ್‌ರವರು ಕಾಶಿ ಯಾತ್ರೆ ಮುಗಿಸಿ ಬಂದ ಬಳಿಕ ಆಸ್ಪತ್ರೆಯಲ್ಲಿ 2010 ಜನವರಿ 18 ರಂದು ನಿಧನರಾದರು. ಅವರು ಪತ್ನಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.ಅವರ ಮಗ ಒಬ್ಬ ಮಗ ಶಂಕರ್ ಅಶ್ವಥ್ ಕೂಡ ನಟನಾಗಿ ಕೆಲವು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಬ್ಬ ಸಜ್ಜನ ಕಲಾವಿದನಾಗಿದ್ದ ಅಶ್ವಥ್‌ರವರು ಸಿನಿಲೋಕದ ಧ್ರುವತಾರೆಯಾಗಿ ರಾರಾಜಿಸುತ್ತಿದ್ದಾರೆ.
✍ ಎನ್ನಾರ್ ಕೆ ವಿಶ್ವನಾಥ್