ಭಾರತೀಯ ಚಿತ್ರರಂಗದ ಇತಿಹಾಸವನ್ನು ಅವಲೋಕಿಸಿದಾಗ ದಾಸರಿ ನಾರಾಯಣ ರಾವ್ ಎಂಬ ಹೆಸರು ಒಂದು ಮೈಲಿಗಲ್ಲಾಗಿ ಕಾಣಿಸುತ್ತದೆ. ಕೇವಲ ತೆಲುಗು ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾದ ದಿಕ್ಕನ್ನೇ ಬದಲಿಸಿದ ಮಹಾನ್ ನಿರ್ದೇಶಕ ಇವರು. ಮೇ 4 ರಂದು ಅವರ ಜನ್ಮದಿನವನ್ನು ತೆಲುಗು ಚಿತ್ರರಂಗವು 'ನಿರ್ದೇಶಕರ ದಿನ’ (Directors Day) ಎಂದು ಅತ್ಯಂತ ಸಂಭ್ರಮದಿಂದ ಆಚರಿಸುತ್ತದೆ. ಈ ಆಚರಣೆಯ ಹಿಂದೆ ದಾಸರಿ ಅವರ ಅರ್ಧ ಶತಮಾನದ ಸುದೀರ್ಘ ಪರಿಶ್ರಮ, ಸಾಧನೆ ಮತ್ತು ಕಲೆಗಾಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ ಅಡಗಿದೆ. ಸಿನಿಮಾ ಎನ್ನುವುದು ಕೇವಲ ಗ್ಲಾಮರ್ ಅಲ್ಲ, ಅದೊಂದು ಸಮಾಜ ಸುಧಾರಣೆಯ ಅಸ್ತ್ರ ಎಂದು ನಂಬಿದ್ದ ದಾಸರಿ ಅವರು, ಪ್ರತಿಯೊಂದು ಚಿತ್ರದಲ್ಲೂ ಬದುಕಿನ ನೈಜತೆಯನ್ನು ತರುತ್ತಿದ್ದರು.
ದಾಸರಿ ನಾರಾಯಣ ರಾವ್ ಅವರಿಗೆ ಬರೋಬ್ಬರಿ 151 ಚಿತ್ರಗಳನ್ನು ನಿರ್ದೇಶಿಸಿದ ಕೀರ್ತಿ ಸಲ್ಲುತ್ತದೆ. ಇಷ್ಟು ದೊಡ್ಡ ಸಂಖ್ಯೆಯ ಸಿನಿಮಾಗಳನ್ನು ನಿರ್ದೇಶಿಸುವುದು ಮಾತ್ರವಲ್ಲದೆ, ಆ ಸಿನಿಮಾಗಳ ಮೂಲಕ ಸಾಮಾಜಿಕ ಸಂಚಲನ ಮೂಡಿಸುವುದು ಅವರ ವಿಶೇಷತೆಯಾಗಿತ್ತು. ಅವರು ನಿರ್ದೇಶಿಸಿದ ‘ಮೇಘಸಂದೇಶಂ’, ‘ತೂತ ಮನವಡು’, ‘ಬೊಬ್ಬಿಲಿ ಪುಲಿ’ ಮತ್ತು ‘ಒಸೋ ರಾಮುಲಮ್ಮ’ ಅಂತಹ ಚಿತ್ರಗಳು ಇಂದಿಗೂ ಸಿನೆಮಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಂತಿದೆ. ಕಥೆಗಾರರಾಗಿ, ಸಂಭಾಷಣೆಗಾರರಾಗಿ ಮತ್ತು ಗೀತರಚನಾಕಾರರಾಗಿ ಚಿತ್ರರಂಗದ ಪ್ರತಿಯೊಂದು ವಿಭಾಗದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದ ಅವರು, ಪ್ರತಿಭೆಯಿದ್ದ ಹೊಸಬರಿಗೆ ಸದಾ ದಾರಿದೀಪವಾಗಿದ್ದರು.
ಚಿತ್ರರಂಗದ ಕಾರ್ಮಿಕರ ಹಿತಕ್ಕಾಗಿ ಅವರು ಹೋರಾಡಿದ ರೀತಿ ಮತ್ತು ಸಿನಿಮಾ ಮಂದಿಗೆ ಕಷ್ಟ ಬಂದಾಗ ಬೆನ್ನಿಗೆ ನಿಲ್ಲುತ್ತಿದ್ದ ಅವರ ಗುಣವೇ ಅವರನ್ನು ಚಿತ್ರರಂಗದ ‘ದೊಡ್ಡಣ್ಣ’ ಎಂದು ಕರೆಸಿಕೊಳ್ಳುವಂತೆ ಮಾಡಿತ್ತು.
ಇದು ಕ್ಯಾಮೆರದ ಹಿಂದೆ ನಿಂತು ಒಂದು ಕಾಲ್ಪನಿಕ ಜಗತ್ತನ್ನು ಸೃಷ್ಟಿಸುವ ಪ್ರತಿಯೊಬ್ಬ ನಿರ್ದೇಶಕನಿಗೆ ಸಲ್ಲಿಸುವ ಗೌರವವಾಗಿದೆ. ಚಿತ್ರದ ಯಶಸ್ಸಿನ ಸಿಂಹಪಾಲು ನಾಯಕ-ನಾಯಕಿಯರಿಗೆ ಸಂದರೂ, ಇಡೀ ಚಿತ್ರದ ಹೊಣೆಯನ್ನು ಹೊತ್ತು ತಂಡವನ್ನು ಮುನ್ನಡೆಸುವ ನಾಯಕನೇ ನಿರ್ದೇಶಕ. ದಾಸರಿ ನಾರಾಯಣ ರಾವ್ ಅವರು ನಿರ್ದೇಶಕರಿಗೆ ಚಿತ್ರರಂಗದಲ್ಲಿ ಒಂದು ಘನತೆ ಮತ್ತು ಮೌಲ್ಯವನ್ನು ತಂದುಕೊಟ್ಟವರು. ಅವರ ಈ ಸ್ಮರಣಾರ್ಥವಾಗಿ ಪ್ರತಿ ವರ್ಷ ಮೇ 4 ರಂದು ತೆಲುಗು ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರು ಒಟ್ಟುಗೂಡಿ ತಮ್ಮ ಗುರುಗಳನ್ನು ಸ್ಮರಿಸುತ್ತಾರೆ. ಒಬ್ಬ ಪತ್ರಕರ್ತರಾಗಿ, ಲೇಖಕರಾಗಿ ಮತ್ತು ಕೇಂದ್ರ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದ ದಾಸರಿ ಅವರು ಬಹುಮುಖ ಪ್ರತಿಭೆಯ ಗಣಿ. ಅವರ ಕಲಾ ಬದುಕು ಮತ್ತು ಸಿದ್ಧಾಂತಗಳು ಇಂದಿನ ತಲೆಮಾರಿನ ನಿರ್ದೇಶಕರಿಗೆ ಸದಾ ಸ್ಫೂರ್ತಿಯ ಸೆಲೆಯಾಗಿವೆ. ಬೆಳ್ಳಿಪರದೆಯ ಹಿಂದಿನ ಆ ಅದೃಶ್ಯ ಶಕ್ತಿಗಳಿಗೆ ನಾವು ನೀಡುವ ಗೌರವವೇ ದಾಸರಿ ಅವರಿಗೆ ಸಲ್ಲಿಸುವ ನಿಜವಾದ ನಮನ.
✍ ಎನ್ನಾರ್ ಕೆ ವಿಶ್ವನಾಥ್